ನವದೆಹಲಿ: ದೇಶದಲ್ಲಿ ಕೋವಿಡ್ ರೂಪಾಂತಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೌತಿಕ ಚುನಾವಣಾ ರ‍್ಯಾಲಿ ಮತ್ತು ರೋಡ್ ಶೋಗಳನ್ನು ನಿರ್ಬಂಧವನ್ನು ಜನವರಿ 22ರ ವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ, ರಾಜ್ಯ ಆರೋಗ್ಯ ಇಲಾಖೆಗಳ ಕಾರ್ಯದರ್ಶಿಗಳು, ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣಾ ಆಯುಕ್ತರೊಂದಿಗೆ ಸಭೆ ಬಳಿಕ ಇಸಿ ಈ ನಿರ್ಧಾರವನ್ನು ಕೈಗೊಂಡಿದೆ.
ಆದರೆ ಒಳಗಾಂಣದಲ್ಲಿ ಸಭೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಸಿಇಸಿ ಸುಶೀಲ್ ಚಂದ್ರ ತಿಳಿಸಿದ್ದಾರೆ. ಒಳಾಂಗಣದ ಸಭೆಯಲ್ಲಿ ಗರಿಷ್ಠ 300 ಜನರು ಅಥವಾ ಹಾಲ್‌ನಲ್ಲಿ ಇರುವ ಸೀಟ್ ಸಾಮರ್ಥ್ಯದ ಶೇ.50 ರಷ್ಟು ಮಂದಿಯನ್ನು ಸೇರಿಸಿ ಸಭೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಮಾದರಿ ನೀತಿ ಸಂಹಿತೆ ಮತ್ತು ಕೋವಿಡ್-19 ತಡೆಗೆ ಈಗಾಗಲೇ ಜಾರಿಯಲ್ಲಿರುವ ಎಲ್ಲಾ ರೀತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಇದೇ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿತ್ತು. ಅದೇ ದಿನ ಸಾರ್ವಜನಿಕ ರ‍್ಯಾಲಿಗಳು, ರೋಡ್ ಶೋ ಹಾಗೂ ಯಾವುದೇ ರೀತಿಯ ಸಭೆಗಳನ್ನು ಜನವರಿ 15ರ ವರೆಗೆ ಮಾಡದಂತೆ ನಿರ್ಬಂಧ ವಿಧಿಸಿತ್ತು. ಇದೀಗ ಈ ನಿರ್ಬಂಧವನ್ನು ಜ.22ರ ವರೆಗೆ ವಿಸ್ತರಿಸಿದೆ. ಆದರೆ ಒಳಾಂಗಣ ಸಭೆಗೆ ಕೆಲ ನಿರ್ಬಂಧಗಳೊಂದಿಗೆ ಅನುಮತಿ ನೀಡಿದೆ.