ಜಾರ್ಖಂಡ್ : ಆರು ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಆಯಾ ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಜಾರ್ಖಂಡ್‌ನ ಡುಮ್ರಿ, ಪಶ್ಚಿಮ ಬಂಗಾಳದ ಧುಪ್ಗುರಿ ಮತ್ತು ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರದಲ್ಲಿ ಸೆಪ್ಟೆಂಬರ್ 5 ರಂದು ಮತದಾನ ನಡೆದಿತ್ತು.
ಡುಮ್ರಿ ಉಪಚುನಾವಣೆ ಮತ ಎಣಿಕೆ: ಬಿಗಿ ಭದ್ರತೆಯ ನಡುವೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಡುಮ್ರಿ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಮತ ಎಣಿಕೆ ವಿಳಂಬವಾಗಿದೆ.
ಕಳೆದ ಏಪ್ರಿಲ್‌ನಲ್ಲಿ ರಾಜ್ಯದ ಶಿಕ್ಷಣ ಸಚಿವರಾಗಿದ್ದ ಜೆಎಂಎಂ ಶಾಸಕ ಜಗರ್ನಾಥ್ ಮಹ್ತೋ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು. ಮೆಹ್ತೋ 2004 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸೆಪ್ಟೆಂಬರ್ 5 ರಂದು ಉಪಚುನಾವಣೆ ಮತದಾನ ನಡೆದಿದ್ದು, ಒಟ್ಟು 2.98 ಲಕ್ಷ ಮತದಾರರಲ್ಲಿ ಶೇ.64.84 ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ : ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಜೆಡಿಎಸ್ನೊಂದಿಗೆ ಮೈತ್ರಿ ಅಗತ್ಯವಿದೆ: ಸಿ ಪಿ ಯೋಗೇಶ್ವರ್
ಮಹ್ತೋ ಅವರ ಪತ್ನಿ ಬೇಬಿ ದೇವಿ ಇಂಡಿಯಾ ಬ್ಲಾಕ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎಜೆಎಸ್‌ಯು ಪಕ್ಷವು ಯಶೋದಾ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕೂಡ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಓವೈಸಿ ಪಕ್ಷದ ಅಭ್ಯರ್ಥಿ ಎಂಡಿ ಅಬ್ದುಲ್ ಮೊಬಿನ್ ರಿಜ್ವಿ ಪರ ಪ್ರಚಾರ ನಡೆಸಿದ್ದರು. ಆದರೆ, ಈ ಬಾರಿ ಜೆಎಂಎಂ ಮತ್ತು ಎಜೆಎಸ್‌ಯು ಪಕ್ಷದ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ : ಇನ್ಮುಂದೆ ಮನೆಯಲ್ಲಿ ಕೂರಲ್ಲ, ಮತ್ತೆ ರಾಜ್ಯದ ಉದ್ದಗಲ ಪ್ರವಾಸ, ಹೋರಾಟ ಆರಂಭಿಸುತ್ತೇನೆ: ಯಡಿಯೂರಪ್ಪ ಘೋಷಣೆ
ಗಿರಿದಿಹ್ ಜಿಲ್ಲೆಯ ಪಚಂಭದ ಕೃಷಿ ಬಜಾರ್ ಸಮಿತಿಯಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಒಟ್ಟು 24 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಒಟ್ಟು 70ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ, ಸೂಕ್ತ ಭದ್ರತೆಗಾಗಿ ಮತ್ತು ನ್ಯಾಯಯುತ ಎಣಿಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರ ವಿವಿಧ ವಿಭಾಗಗಳನ್ನು ನಿಯೋಜಿಸಲಾಗಿದೆ ಎಂದು ಗಿರಿದಿಹ್ ಉಪ ಆಯುಕ್ತ ಮತ್ತು ಚುನಾವಣಾ ಅಧಿಕಾರಿ ನಮನ್ ಪ್ರೀಶ್ ಲಾಕ್ರಾ ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ : ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ.. ಇಂಡಿಯಾ ಎನ್‌ಡಿಎ ಮಧ್ಯೆ ನೇರ ಪೈಪೋಟಿ