ಗುವಾಹಟಿ(ಅಸ್ಸೋಂ): ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ಕಳೆದುಕೊಂಡ ಸೇನಾಪಡೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತ ಹೆಚ್ಚಿಸಲು ಸಿಎಂ ಬಿಸ್ವಂತ್ ಶರ್ಮಾ ಅವರ ಸರ್ಕಾರ ಮುಂದಾಗಿದೆ.
ಪರಿಹಾರ ಧನ ಹೆಚ್ಚಳ
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈವರೆಗೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು 20 ಲಕ್ಷ ರೂ. ನಿಂದ 50 ಲಕ್ಷ ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಪಿಜುಶ್ ಹಜಾರಿಕಾ ಮಾಹಿತಿ ನೀಡಿದ್ದಾರೆ.
ಬಂಡುಕೋರರ ವಿರುದ್ಧದ ಹೋರಾಟದಲ್ಲಿ ಮೃತ ಪಡುವವರ ಹೊರತಾಗಿ, ಉಗ್ರಗಾಮಿ ಕಾರ್ಯಾಚರಣೆ, ವಿಪತ್ತು ನಿರ್ವಹಣೆ, ಶತ್ರುಗಳ ವಿರುದ್ಧ ಹೋರಾಡುವಾಗ ಮೃತಪಡುವವರೂ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದು ಪಿಜುಶ್ ಹೇಳಿದ್ದಾರೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಅಸ್ಸೋಂ ಅಬಕಾರಿ ನಿಯಮವನ್ನು ತಿದ್ದುಪಡಿ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಟ್ರಾನ್ಸಿಟ್ ಪಾಸ್ ವ್ಯವಸ್ಥೆ ಜಾರಿಗೆ
ನೆರೆ ರಾಜ್ಯಗಳಿಂದ, ವಿಶೇಷವಾಗಿ ಅರುಣಾಚಲ ಪ್ರದೇಶದಿಂದ ಮದ್ಯ ಕಳ್ಳಸಾಗಣೆ ನಿಲ್ಲಿಸಲು ಟ್ರಾನ್ಸಿಟ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಐಎಮ್‌ಎಫ್‌ಎಲ್ ಮತ್ತು ದೇಶದ ಚಿಲ್ಲರೆ ಮದ್ಯ ಮಾರಾಟ ಮಿತಿಯನ್ನು 9 ಬಲ್ಕ್ ಲೀಟರ್‌ನಿಂದ (ಬಲ್ಕ್ : ಬೃಹತ್ ಪ್ರಮಾಣದಲ್ಲಿ ಮದ್ಯ ಅಳೆಯುವ ಸಾಧನ) 18 ಬಿಎಲ್‌ಗೆ ಹೆಚ್ಚಿಸಲಾಗಿದೆ.
3,284 ಕೋಟಿ ರೂ.ಗಳ ವಿದ್ಯುತ್ ಯೋಜನೆಗೆ ಅನುಮತಿ
ಅಸ್ಸೋಂ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (APDCL) ನ 3,284 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಏಷ್ಯನ್ ಮೂಲಸೌಕರ್ಯ ಮತ್ತು ಹೂಡಿಕೆ ಬ್ಯಾಂಕ್ (AllB) ನಿಂದ ಈ ಯೋಜನೆಗೆ ಅನುದಾನ ನೀಡಲಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಈ ನಿರ್ಧಾರ ಮಾಡಲಾಗಿದೆ.
2,674 ಹೊಸ ಹೈವೋಲ್ಟೇಜ್ ಟ್ರಾನ್ಸ್‌ಫಾರ್ಮರ್, ಸುಮಾರು 7,000 ಕಿ.ಮೀ. ಹೊಸ 33 kV ಮತ್ತು 1.1 kV ಲೈನ್‌ಗಳು, 196 ಹೊಸ 33 kV ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು. ಒಟ್ಟು 1.80 ಲಕ್ಷ ಹೊಸ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಸಹ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ಷೇತ್ರಕ್ಕೊಂದು ಆದರ್ಶ ವಿಶ್ವ ವಿದ್ಯಾಲಯ
ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ ಮತ್ತು ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿ, ಆದರ್ಶ ವಿಶ್ವವಿದ್ಯಾಲಯ ಸಂಘಟನೆಯನ್ನು ರಚಿಸಲು ನಿರ್ಧರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆದರ್ಶ ವಿದ್ಯಾಲಯ ಸ್ಥಾಪನೆ ಮಾಡಲಾಗುವುದು.
ಗುತ್ತಿಗೆ ಅಧಿಕಾರಿಗಳ ನೇಮಕ
ಕೃಷಿ ಇಲಾಖೆಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಯ ಕೊರತೆಯನ್ನು ಪರಿಗಣಿಸಿ, ಎಲ್ಲಾ ಜಿಲ್ಲೆಗಳಲ್ಲಿ ಗುತ್ತಿಗೆ ಅಧಿಕಾರಿಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಸ್ಸೋಂ ಬೀಜ ಮತ್ತು ಸಾವಯವ ಪ್ರಮಾಣೀಕರಣ ಏಜೆನ್ಸಿ (ASOCA) ಯಿಂದ ಬೀಜ ಪ್ರಮಾಣೀಕರಣದ ಶುಲ್ಕವನ್ನು ಮೂರು ವರ್ಷಗಳವರೆಗೆ ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಜಾರಿಕಾ ಹೇಳಿದರು.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: REET ಪರೀಕ್ಷೆಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿ 6 ಜನ ದುರ್ಮರಣ