ಗುವಾಹಟಿ( ಒಡಿಶಾ): ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರವಾಹ ಮತ್ತು ಭೂಕುಸಿತಕ್ಕೆ ಇದುವರೆಗೂ 14 ಜನ ಬಲಿಯಾಗಿದ್ದಾರೆ. ಅಸ್ಸೋಂ ಸರ್ಕಾರದ ವಿಪತ್ತು ನಿರ್ವಹಣಾ ಘಟಕ ಅವಿರತವಾಗಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಪ್ರವಾಹದಿಂದಾಗಿ 29 ಜಿಲ್ಲೆಗಳ 3,246 ಗ್ರಾಮಗಳು ಭಾಗಶಃ ಇಲ್ಲವೇ ಸಂಪೂರ್ಣವಾಗಿ ಮುಳುಗಿವೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 8,39,691 ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಅಂದಾಜಿನ ಪ್ರಕಾರ, 6,248 ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದರೆ, 36,845 ಮನೆಗಳು ಭಾಗಶಃ ಹಾನಿಗೊಳಿಸಿದೆ. ಇದಲ್ಲದೇ ಪ್ರವಾಹದ ನೀರು ಸೇತುವೆಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಹಲವೆಡೆ ಒಡ್ಡುಗಳನ್ನು ಒಡೆದು ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಇದರಿಂದ ಜನ ತಮ್ಮ ಊರುಗಳ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ 100,732.43 ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ ಎಂದು ASDMA ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ವಾಯುಪಡೆಯ (ಐಎಎಫ್) ಸಹಾಯದಿಂದ ಕಳೆದ 2 ದಿನಗಳಲ್ಲಿ ದಿಮಾ ಹಸಾವೊ ಜಿಲ್ಲೆಯಿಂದ ಒಟ್ಟು 269 ಜನರನ್ನು ರಕ್ಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಎಸ್ಡಿಎಫ್ಆರ್ ತಿಳಿಸಿದೆ. ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಕಾರವು 343 ಪರಿಹಾರ ಶಿಬಿರಗಳನ್ನು ತೆರೆದಿದೆ. 411 ಪರಿಹಾರ ವಿತರಣಾ ಕೇಂದ್ರಗಳನ್ನು ಆರಂಭಿಸಿದ್ದು, ಒಟ್ಟು 86,772 ನಿರಾಶ್ರಿತರು ಈ ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ ಎಂದು ASDMA ತಿಳಿಸಿದೆ.
ಇದನ್ನು ಓದಿ:ಕೂಲ್ಡ್ರಿಂಕ್ಸ್ ಬಾಟಲಿ ಮುಚ್ಚಳ ಗಂಟಲಲ್ಲಿ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು