ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ 5-4 ಅಂತರದ ಗೋಲು ಗಳಿಕೆ ಮಾಡುವ ಮೂಲಕ 41 ವರ್ಷಗಳ ನಂತರ ಪದಕ ಗೆದ್ದಿರುವ ಸಾಧನೆ ಮಾಡಿದ್ದು, ಇದಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಮಗ ಅಶೋಕ್ ಕುಮಾರ್ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.
ಹಾಕಿ ತಂಡದ ಗೆಲುವು ಇಡೀ ಭಾರತದ ಜಯವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಸ್ಗಳು ಭಾಗಿಯಾಗುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆ ತುಂಬಿದ್ದರು. ಅದರ ಫಲವಾಗಿ ಇಂದು ಅನೇಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ 15-20 ವರ್ಷಗಳಲ್ಲಿ ನಾನು ಇಂತಹ ಪ್ರದರ್ಶನ ನೋಡಿಲ್ಲ. ಬರುವ ದಿನಗಳಲ್ಲಿ ಭಾರತ ಮತ್ತಷ್ಟು ಬಲಿಷ್ಠಗೊಂಡರೆ ಚಿನ್ನದ ಪದಕ ಗೆಲ್ಲುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ದಹಿಯಾಗೆ 4 ಕೋಟಿ ರೂ., ಸರ್ಕಾರಿ ಕೆಲಸ, ಪ್ಲಾಟ್ ಜೊತೆ ಗ್ರಾಮದಲ್ಲೇ ಒಳಾಂಗಣ ಕ್ರೀಡಾಂಗಣ!
ಭಾರತ ಹಾಕಿ ತಂಡದ ಪ್ರದರ್ಶನದಿಂದ ನಾವೆಲ್ಲರೂ ಸಂತೋಷಗೊಂಡಿದ್ದು, ಸಾವಿರಾರು ಯುವಕರಿಗೆ ಈ ಆಟ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಭಾರತ ಸೆಮಿಫೈನಲ್ನಲ್ಲಿ ಸೋಲು ಕಂಡಿತ್ತು. ಆದರೆ, ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ.