ಪಣಜಿ(ಗೋವಾ): ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೋವಾದಲ್ಲಿ 20 ಸ್ಥಾನಗಳನ್ನು ಗೆದ್ದಿದ್ದು, ಈಗ ಮೂವರು ಸ್ವತಂತ್ರ ಶಾಸಕರು ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಓರ್ವ ಶಾಸಕನ ಸಹಾಯದಿಂದ ಸರ್ಕಾರ ರಚಿಸಲು ಮುಂದಾಗಿದೆ. ಅಧಿಕಾರಕ್ಕಾಗಿ 21 ಸ್ಥಾನಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಈಗ ಬಿಜೆಪಿ ಒಕ್ಕೂಟದ ಬಲ 24ಕ್ಕೆ ಏರಿಕೆಯಾಗಿದೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಂಸದೀಯ ಸಮಿತಿ ಗುರುವಾರ ತಡರಾತ್ರಿ ದೆಹಲಿಯಲ್ಲಿ ಸಭೆ ನಡೆಸಿ ಗೋವಾಕ್ಕೆ ವಿಶೇಷ ವೀಕ್ಷಕರನ್ನು ಆಯ್ಕೆ ಮಾಡಿದೆ. ವಿಶೇಷ ವೀಕ್ಷಕರು ಗೋವಾಗೆ ಬರಲಿದ್ದು, ಅವರ ಸಮ್ಮುಖದಲ್ಲಿ ಪಕ್ಷದ ಶಾಸಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಯುಪಿಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳನ್ನ ವಿಧಾನಸಭೆಗೆ ಕಳುಹಿಸಿದ ಮತದಾರ!
ಆಯ್ಕೆ ನಂತರ ಸರ್ಕಾರ ಸ್ಥಾಪನೆಗಾಗಿ ರಾಜ್ಯಪಾಲರಿಗೆ ಹಕ್ಕೊತ್ತಾಯ ಮಾಡುವುದಾಗಿ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮೂಲಗಳ ಪ್ರಕಾರ ಗೋವಾದಲ್ಲಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಹೀಗಾಗಿ ಅವರೇ ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ ಎನ್ನಲಾಗಿದೆ.
ಗೋವಾದಲ್ಲಿ ಬಿಜೆಪಿ ಗೆಲುವಿನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್ ಅಧಿಕಾರ ಸ್ಥಾಪನೆ ಕುರಿತು ಮಾಹಿತಿ ನೀಡಿ, 10 ವರ್ಷಗಳ ನಂತರ ಗೋವಾದ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ, ಗೋವಾ ಚುನಾವಣಾ ಉಸ್ತುವಾರಿ ಸಿ.ಟಿ.ರವಿ, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಭಾಗವಹಿಸಿದ್ದರು.