ಕೋಲ್ಕತ್ತಾ: ಸಂಸತ್ತಿನಲ್ಲಿ ಎಎಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಕೇಜ್ರಿವಾಲ್ ಅವರು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಅವರ ಬೆಂಬಲ ಪಡೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಇಂದು ಮಹತ್ವದ ಮಾತುಕತೆ ನಡೆಸಿದರು. ಎಲ್ಲಾ 'ಸಮಾನ' ರಾಜಕೀಯ ಪಕ್ಷಗಳು ದೆಹಲಿ ಸಿಎಂ ಅವರಿಗೆ ಬೆಂಬಲಿಸುವಂತೆ ಅವರು ಇದೇ ವೇಳೆ ಮನವಿ ಮಾಡಿದರು. ಆಡಳಿತಾತ್ಮಕ ಸೇವೆಗಳನ್ನು ನಿಯಂತ್ರಿಸುವ ಆದೇಶ ಜಾರಿ ಮಾಡಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಹಾಗೂ ನ್ಯಾಯಾಂಗ ನಿಂದನೆ ಆಗಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ ದೆಹಲಿ ಸರ್ಕಾರ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. ಅಷ್ಟೇ ಅಲ್ಲ ಕೇಂದ್ರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯದಂತೆ ಪ್ರತಿಪಕ್ಷಗಳ ಬೆಂಬಲ ಪಡೆಯಲು ರಣತಂತ್ರ ಮಾಡುತ್ತಿದ್ದು, ಕೇಂದ್ರ ಸರ್ಕಾರದ ವಿರೋಧಿ ಸದಸ್ಯರ ಬೆಂಬಲ ಕ್ರೋಢೀಕರಣಕ್ಕೆ ಮುಂದಾಗಿದೆ.
ಇಂದು ಪಶ್ಚಿಮಬಂಗಾಳ ಸಿಎಂ ನಬನ್ನಾದಲ್ಲಿ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿಯಾದರು. ಈ ಬೇಟಿ ಹಾಗೂ ಮಾತುಕತೆ ಬಳಿಕ ಮಾತನಾಡಿದ ಬ್ಯಾನರ್ಜಿ, "ಸುಪ್ರೀಂಕೋರ್ಟ್ ಮಾತ್ರ ದೇಶವನ್ನು ಉಳಿಸಬಲ್ಲದು. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸುಗ್ರೀವಾಜ್ಞೆಯನ್ನು ತರುವುದು ಚುನಾಯಿತ ಸರ್ಕಾರವನ್ನು ನಿರ್ಲಕ್ಷಿಸುವ ಕೇಂದ್ರದ ಪ್ರಯತ್ನವನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ನಾನು ಎಲ್ಲಾ ಪಕ್ಷಗಳಿಗೆ ಒಟ್ಟಾಗಿ ವಿರೋಧಿಸಲು ಮನವಿ ಮಾಡುತ್ತೇನೆ. ಈ ಹೋರಾಟ ಮತ್ತು ಒಗ್ಗಟ್ಟು 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಬಲವಾದ ಸಂದೇಶವಾಗಿದೆ. ನಮ್ಮ ಪಕ್ಷವು ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತದೆ ಮತ್ತು ನಾವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವನ್ನು ಕೋರುತ್ತೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಜ್ರಿವಾಲ್, ಕಳೆದ ಎಂಟು ವರ್ಷಗಳಿಂದ ದೆಹಲಿ ಜನತೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಇನ್ನು ನಮ್ಮ ಹೋರಾಟಕ್ಕೆ ಸುಪ್ರೀಂ ಕೋರ್ಟ್ ನ್ಯಾಯ ನೀಡಿದೆ. ಯಾವ ಸರ್ಕಾರ ಬಿಜೆಪಿಗೆ ಬೆಂಬಲ ನೀಡುವುದಿಲ್ಲವೂ ಅವರನ್ನು ಹತ್ತಿಕ್ಕುವುದು ಬಿಜೆಪಿಯವರ ಚಾಳಿಯಾಗಿದೆ. ಪಂಜಾಬ್ ಸರ್ಕಾರವು ತಮ್ಮ ಬಜೆಟ್ ಅಧಿವೇಶನ ನಡೆಸಲು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗಿತ್ತು ಮತ್ತು ಹಲವಾರು ಬಿಜೆಪಿಯೇತರ ಪಕ್ಷಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದು ನನ್ನ ಹೋರಾಟ ಮಾತ್ರವಲ್ಲ ಎಲ್ಲಾ ಬಿಜೆಪಿಯೇತರ ಸರ್ಕಾರಗಳ ಹೋರಾಟ" ಎಂದು ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದರು.
ಮತ್ತೊಂದು ಕಡೆ, ನಮ್ಮ ಸರ್ಕಾರದ ಈ ಹಿಂದಿನ ಡಿಸಿಎಂ ಮನೀಶ್ ಸಿಸೋಡಿಯಾ ಅವರ ವಿಷಯದಲ್ಲಿ ಕೇಂದ್ರೀಯ ತನಿಖಾ ದಳಗಳು ನಡೆದುಕೊಳ್ಳುತ್ತಿರುವ ನೀತಿಗಳ ವಿರುದ್ಧವೂ ಕೇಜ್ರಿವಾಲ್ ಹರಿಹಾಯ್ದರು. ಇನ್ನು ಟಿಎಂಸಿ ಪಕ್ಷದ ನಾಯಕ ಮತ್ತು ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಸಿಬಿಐ ಒಂದು ದಿನದ ನೋಟಿಸ್ ನೀಡಿದ ರೀತಿ ಬಗ್ಗೆಯೂ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನು ಓದಿ:ಬಾರ್ಗರಿ ಧರ್ಮ ನಿಂದನೆ ಪ್ರಕರಣ: ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಆರೋಪಿ ಸಂದೀಪ್ ಬರೆಟ್ಟಾ ಬಂಧನ