ಗಯಾ (ಬಿಹಾರ): ಬಿಹಾರದ ಬೋಧಗಯಾದಲ್ಲಿ ಅರುಣಾಚಲ ಪ್ರದೇಶದ ಮೂಲದ ಪ್ರವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೇ, ಕಣ್ಮರೆಯಾದ ಪ್ರವಾಸಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.
ನಾಪತ್ತೆಯಾದ ಮಹಿಳೆಯನ್ನು 32 ವರ್ಷದ ತಾವ್ ಲೋಬ್ಸಾಂಗ್ ತೆಸರಿಂಗ್ ಎಂದು ತಿಳಿದು ಬಂದಿದೆ. ಇವರು ಅರುಣಾಚಲ ಪ್ರದೇಶದ ತಬಾನಿ ಜಿಲ್ಲೆಯ ಜಂಗ್ ಪೊಲೀಸ್ ಠಾಣೆಯ ಮಹೋ ನಿವಾಸಿಯಾಗಿದ್ದಾರೆ. ಪೊಲೀಸರ ಪ್ರಕಾರ, ಜನವರಿ 9ರಂದು ಸಂಜೆ 4 ಗಂಟೆಗೆ ಬೋಧಗಯಾ ದೇವಸ್ಥಾನದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆದರೆ, ಬಳಿಕ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ ಪ್ರತಿಕ್ರಿಯಿಸಿ, ಅರುಣಾಚಲ ಪ್ರದೇಶದ ತಾವ್ ಲೋಬ್ಸಾಂಗ್ ತೆಸರಿಂಗ್ ಬೋಧಗಯಾಕ್ಕೆ ಭೇಟಿ ನೀಡಲು ಬಂದಿದ್ದರು. ದೇವಸ್ಥಾನದ ಬಳಿ ಜನವರಿ 9 ರಿಂದ ಕಾಣ್ಮರೆಯಾಗಿದ್ದಾರೆ. ಈ ಕುರಿತು ಬೋಧಗಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಕೆಯ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ. ಕಾಣೆಯಾದ ಮಹಿಳಾ ಪ್ರವಾಸಿ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಪ್ರವಾಸಿ ಮಹಿಳೆಯ ಸುಳಿವು ಸಿಕ್ಕವರು ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಆಗ್ರಾದಲ್ಲಿ ವಿದೇಶಿ ಪ್ರವಾಸಿ ಸಾವು ಪ್ರಕರಣ: ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಆಗ್ರಾದಲ್ಲಿ ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಫ್ರಾನ್ಸ್ ಮೂಲದ ಸುಸಾನೆ ಸಾವನ್ನಪ್ಪಿದ್ದ ಮಹಿಳೆ ಎಂದು ಗುರುತಿಸಲಾಗಿತ್ತು. ಈಕೆ ತಮ್ಮ ಪತಿ ಮತ್ತು ಕುಟುಂಬಸ್ಥರು ಸೇರಿ 20 ಸದಸ್ಯರ ಪ್ರವಾಸಿಗರೊಂದಿಗೆ ಭಾರತಕ್ಕೆ ಬಂದಿದ್ದರು.
ಈ ಎಲ್ಲ ಫ್ರೆಂಚ್ ಪ್ರವಾಸಿಗರು ಭರತ್‌ಪುರಕ್ಕೆ ಭೇಟಿ ನೀಡಿದ ನಂತರ ಫತೇಪುರ್ ಸಿಕ್ರಿ ಸ್ಮಾರಕಕ್ಕೆ ತೆರಳಿದ್ದರು. ಆದರೆ, ಈ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಯತಪ್ಪಿ 8 ಅಡಿ ಎತ್ತರದ ಗೋಡೆಯಿಂದ ನೆಲಕ್ಕೆ ಬಿದ್ದಿದ್ದರು. ಇದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಬಳಿಕ ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪಲು ಸಹ ತಡವಾಗಿತ್ತು. ಬಳಿಕ ಸುಸಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಈ ಘಟನೆ ಕುರಿತು ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು.
ಇದನ್ನೂ ಓದಿ: ಸಂಸತ್ ಭದ್ರತೆ ಉಲ್ಲಂಘನೆ ಕೇಸ್: ಆರೋಪಿಗಳಿಗೆ ನಾರ್ಕೊ, ಪಾಲಿಗ್ರಾಫ್ ಪರೀಕ್ಷೆ