ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂಕೋರ್ಟ್ ನಿತ್ಯ ವಿಚಾರಣೆ ನಡೆಸುತ್ತಿದ್ದು, ಮುಖ್ಯ ಅರ್ಜಿದಾರರಾಗಿರುವ ಬಾರಾಮುಲ್ಲಾ ಕ್ಷೇತ್ರದ ಸಂಸದ ಮುಹಮದ್ ಅಕ್ಬರ್ ಲೋನ್ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಖಂಡಿಸಿ, ದೇಶದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೋರ್ಟ್ ಸೂಚಿಸಿದೆ.
15ನೇ ದಿನದ ವಿಚಾರಣೆಯಲ್ಲಿ ಮುಖ್ಯ ಅರ್ಜಿದಾರ ಅಕ್ಬರ್ ಲೋನ್ ವಿರುದ್ಧವೇ ಭಾರತ ವಿರೋಧಿ ನಡೆಯ ಬಗ್ಗೆ ವಾದ ನಡೆಯಿತು. ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅರ್ಜಿದಾರ ಅಕ್ಬರ್ ಲೋನ್ ದೇಶದ ಸಂವಿಧಾನ ನೀಡಿರುವ ಅವಕಾಶದಂತೆ ಇಲ್ಲಿನ ಸಂಸದರಾಗಿದ್ದಾರೆ. ಈ ಹಿಂದೆ ಅವರು ಶಾಸಕಾಗಿದ್ದ ವೇಳೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲೇ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ ಆರೋಪವಿದೆ. ಹೀಗಾಗಿ ಅವರು ಮೊದಲು ದೇಶದ ಸಂವಿಧಾನದ ನಿಷ್ಠೆಯನ್ನು ಸಾಬೀತು ಮಾಡಲಿ. ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ವಿರೋಧಿಸಿ ಅಫಿಡವಿಟ್ ಸಲ್ಲಿಸಬೇಕು ಎಂದು ಕೇಳಿದರು.
ಮಾಹಿತಿ ನೀಡಲು ಸೂಚಿಸಿದ ಕೋರ್ಟ್: ಇದನ್ನು ಮನ್ನಿಸಿದ ಕೋರ್ಟ್, ಸಂಸದ ಅಕ್ಬರ್ ಲೋನ್ಗೆ ಭಾರತದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದವನ್ನು ವಿರೋಧಿಸುವ ಬಗ್ಗೆಯೂ ಲೋನ್ ದೃಢೀಕರಣ ನೀಡಬೇಕು ಎಂದೂ ಹೇಳಿದೆ.
ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಸದ ಅಕ್ಬರ್ ಲೋನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರ ಕ್ರಮ ಅಸಾಂವಿಧಾನಿಕವಾಗಿದೆ. ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ನೀಡಿ ವಿಶೇಷಾಧಿಕಾರ ಪುನಸ್ಥಾಪಿಸಬೇಕು ಎಂದು ಕೋರಿದ್ದಾರೆ.
ಅರ್ಜಿದಾರರ ವಿರುದ್ಧವೇ ಆರೋಪ: ಕೆಲವು ದಿನಗಳ ಹಿಂದೆ ಅಕ್ಬರ್ ವಿರುದ್ಧವೇ ವ್ಯಕ್ತಿಯೊಬ್ಬರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಲೋನ್ ಅವರು ಶಾಸಕರಾಗಿದ್ದಾಗ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ. ಸೋಮವಾರ ಅರ್ಜಿ ವಿಚಾರಣೆಗೆ ಬಿಡುವು ಇದ್ದು, ಮಂಗಳವಾರದಂದು ಲೋನ್ ಅವರು ಇದರ ವಿರುದ್ಧ ಆಕ್ಷೇಪಣೆ ಅಥವಾ ಖಂಡನೆಯನ್ನು ಸಲ್ಲಿಸಬಹುದು.
ಇನ್ನು 15 ದಿನಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಶೀಘ್ರವೇ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು. ಅಲ್ಲಿ ಆದಷ್ಟು ಬೇಗ ಚುನಾವಣೆ ಕೂಡ ನಡೆಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ; ಸುಪ್ರೀಂ ಕೋರ್ಟ್ಗೆ ಕೇಂದ್ರದ ಸ್ಪಷ್ಟನೆ