ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಆರ್ಟಿಕಲ್ 35A ವಾಸ್ತವಿಕವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370 ಮತ್ತು 35A ವಿಧಿಗಳನ್ನು ರದ್ದುಗೊಳಿಸಿ 2019ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ರದ್ಧತಿಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಕೆಲವು ದಿನಗಳಿಂದ ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾ.ಎಸ್.ಕೆ.ಕೌಲ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಬಿ.ಆರ್.ಗವಾಯಿ ಹಾಗು ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ.
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ನ್ಯಾಯಾಲಯದ ಮುಂದೆ ಆರ್ಟಿಕಲ್ 35Aಯನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇದೆ ಎಂದು ಹೇಳಿದರು. ದಶಕಗಳಿಂದ ಜನರು ಇಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದರೂ, ಹೊರಗಿನ ವ್ಯಕ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾಗವನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಇಲ್ಲಿ ಯಾವುದೇ ಹೂಡಿಕೆಯೂ ಆಗುತ್ತಿರಲಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಆರ್ಟಿಕಲ್ 35A ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕ್ಷೇತ್ರಗಳಲ್ಲಿ ವಿನಾಯಿತಿ ನೀಡುತ್ತದೆ. ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಪಡೆಯುವ ಉದ್ಯೋಗ, ಸ್ಥಿರ ಆಸ್ತಿಗಳ ಖರೀದಿ ಮತ್ತು ರಾಜ್ಯದಲ್ಲಿ ವಾಸಿಸುವ ಬಗ್ಗೆ ಪ್ರತ್ಯೇಕವಾಗಿ ವಿವರಿಸುತ್ತದೆ. ರಾಜ್ಯದಲ್ಲಿ 35A ಜಾರಿಗೊಳಿಸುವುದರಿಂದ ಆರ್ಟಿಕಲ್ 19ನ ಮೂರು ಮೂಲಭೂತ ಹಕ್ಕುಗಳು ಮತ್ತು ಆರ್ಟಿಕಲ್ 16 ಉಲ್ಲಂಘನೆಯಾಗುತ್ತದೆ. ಜನರ ವಾಸ್ತವಿಕ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವಂತಾಗುತ್ತದೆ ಎಂದು ಹೇಳಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮುಂದುವರೆಸಿ, ಉದ್ಯೋಗ ನಮ್ಮ ಬದುಕುವ ಹಕ್ಕು ಎಂದು ಹೇಳಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, 35A ಜಮ್ಮು ಕಾಶ್ಮೀರದ ಖಾಯಂ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ. ಹೊರಗಿನ ನಿವಾಸಿಗಳಿಗೆ ನಿರ್ಬಂಧ ವಿಧಿಸುತ್ತದೆ. ಅಲ್ಲದೆ ಆರ್ಟಿಕಲ್ 16(1) ಎಲ್ಲರಿಗೂ ಸಮಾನ ಅವಕಾಶವನ್ನು ವಿವರಿಸುತ್ತದೆ ಎಂದರು.
ಕೇಂದ್ರ ಸರ್ಕಾರದ ರದ್ಧತಿ ನಿರ್ಧಾರವನ್ನು ಸಮರ್ಥಿಸಿಕೊಂಡ ಮೆಹ್ತಾ, ಈಗ ಭಾರತದ ಸಂವಿಧಾನವು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತಿದೆ. ಇದರಿಂದ ಜಮ್ಮು ಕಾಶ್ಮೀರದಲ್ಲಿ ಸಮಾನತೆ ಉಂಟಾಗಿದೆ. ಆರ್ಟಿಕಲ್ 35 ತೆಗೆದ ನಂತರ ಅಲ್ಲಿನ ಜನರು ಮೂಲಭೂತ ಹಕ್ಕುಗಳನ್ನು ಪಡೆದರು. ಹೂಡಿಕೆಗಳು ಹೆಚ್ಚಾಗಿವೆ. ಪ್ರವಾಸೋದ್ಯಮ ಪ್ರಾರಂಭವಾಗಿದೆ. ಸಣ್ಣ ಉದ್ಯಮಗಳು ಶುರುವಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಸುಮಾರು 16 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೋಟೆಲ್ಗಳು ನಿರ್ಮಾಣವಾಗುತ್ತಿವೆ. ಜನರಿಗೆ ವಿಫುಲ ಉದ್ಯೋಗಾವಕಾಶಗಳು ದೊರೆಯುತ್ತಿದೆ ಎಂದು ಹೇಳಿದರು.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಆರ್ಟಿಕಲ್ 370 ಮತ್ತು 35A ಅನ್ನು ತೆಗೆದು ಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತು. ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಈ ಕ್ರಮವನ್ನು ಹಲವು ರಾಜಕೀಯ ಪಕ್ಷಗಳು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಇದನ್ನೂ ಓದಿ: ಆರ್ಟಿಕಲ್ 370 ರದ್ದತಿ ವಿರೋಧಿಸುವವರಿಗೆ ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಮತ್ತು ಭೌಗೋಳಿಕತೆಯ ಅರಿವಿಲ್ಲ: ಗುಲಾಂ ನಬಿ ಆಜಾದ್