ನವದೆಹಲಿ: ದೇಶಾದ್ಯಂತ ಹಲವಾರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 5.3 ಲಕ್ಷಕ್ಕೂ ಅಧಿಕ ಪೊಲೀಸ್ ಹುದ್ದೆಗಳು ಖಾಲಿ ಇವೆ. ಉತ್ತರ ಪ್ರದೇಶದಲ್ಲೇ 1 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳು ಇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪೊಲೀಸರ ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ಭಾರತೀಯ ಜನನಾಯಕ ಕಚ್ಚಿ ಪಕ್ಷದ ಸಂಸದ ಡಾ.ಟಿ.ಆರ್. ಪರಿವೇಂದರ್ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಗೃಹ ಖಾತೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರ ನೀಡಿದ್ದಾರೆ. 2020ರ ಜನವರಿ 1ರವರೆಗೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ಡಿ) ಸಂಗ್ರಹಿಸಿದ ಮಾಹಿತಿ ಪ್ರಕಾರ 26,23,225 ಲಕ್ಷ ಪೊಲೀಸ್ ಮಂಜೂರಾತಿ ಹುದ್ದೆಗಳು ಇವೆ. ಇದರಲ್ಲಿ 20,91,488 ಹುದ್ದೆಗಳು ಭರ್ತಿಯಾಗಿದ್ದು, ಉಳಿದ 5,31,737 ಹುದ್ದೆಗಳು ಖಾಲಿ ಇವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ 'ಪೊಲೀಸ್' ವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಹೀಗಾಗಿ ಖಾಲಿ ಹುದ್ದೆಗಳನ್ನು ಆಯಾ ರಾಜ್ಯಗಳೇ ಭರ್ತಿ ಮಾಡಬೇಕು. ಅಲ್ಲದೇ, ಕೇಂದ್ರ ಸರ್ಕಾರ ಸಹ ಖಾಲಿ ಹುದ್ದೆಗಳ ಭರ್ತಿಗೆ ಸಲಹೆ ನೀಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯವಾರು ಪೊಲೀಸರು ಹುದ್ದೆಗಳನ್ನು ಗಮನಿಸಿದರೆ ಬಿಪಿಆರ್ಡಿ ಪ್ರಕಾರ ನಾಗಾಲ್ಯಾಂಡ್ನಲ್ಲಿ ಮಂಜೂರಾತಿ ಹುದ್ದೆಗಳಿಗಿಂತ 1,375 ಹೆಚ್ಚುವರಿ ಪೊಲೀಸರು ಇದ್ದಾರೆ. ಉತ್ತರ ಪ್ರದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳು ಇದ್ದರೆ, ಪಶ್ಚಿಮ ಬಂಗಾಳದಲ್ಲಿ 55,294 ಮತ್ತು ಬಿಹಾರದಲ್ಲಿ 47,099 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲಿಖಿತ ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ 100 ಜನರಿಗೆ ಮೋಸ: ಇಬ್ಬರು ಅರೆಸ್ಟ್