ಕಾಬೂಲ್(ಅಫ್ಘಾನಿಸ್ತಾನ) : 150 ಮಂದಿ ಭಾರತದ ಪ್ರಜೆಗಳ ವಿಚಾರಣೆ ನಡೆಸಿದ ತಾಲಿಬಾನ್ ಉಗ್ರರು ಅವರೆಲ್ಲರನ್ನೂ ವಾಪಸ್ ಕಾಬೂಲ್ ಏರ್ಪೋರ್ಟ್ಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಆಫ್ಘನ್ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಮರಳಲು ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 150 ಮಂದಿ ಭಾರತೀಯ ಪ್ರಜೆಗಳು ಕಾಯುತ್ತಿದ್ದರು. ಆಗ ಅಲ್ಲಿಗೆ ಏಕಾಏಕಿ ಬಂದ ತಾಲಿಬಾನ್ ರಕ್ಕಸರು ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಪರಿಶೀಲಿಸಿದರು. ನಂತರ ಇವರೆಲ್ಲರನ್ನೂ ವಾಪಸ್ ಕಾಬೂಲ್ ಏರ್ಪೋರ್ಟ್ಗೆ ಕಳುಹಿಸಿದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕಾಬೂಲ್ನಿಂದ 85 ಮಂದಿ ಭಾರತೀಯರನ್ನು ಭಾರತೀಯ ವಾಯು ಸೇನೆಯ ವಿಮಾನ ತಜಿಕಿಸ್ತಾನಕ್ಕೆ ಕರೆದುಕೊಂಡು ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.
ಯುದ್ಧ ಪೀಡಿತ ಅಫ್ಘಾನಿಸ್ತಾದಿಂದ ಇವರೆಲ್ಲರನ್ನೂ ಸದ್ಯದಲ್ಲೇ ಏರ್ಲಿಫ್ಟ್ ಮಾಡಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ತಾಲಿಬಾನಿಗಳು ಭಾರತೀಯರನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿತ್ತು. ಈ ವರದಿಯನ್ನು ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಸೇಕ್ ತಳ್ಳಿ ಹಾಕಿದ್ದನು.
ಆತಂಕದಲ್ಲೇ ಇದ್ದಾರೆ ಇನ್ನೂ 1000 ಭಾರತೀಯರು!
ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಆದರೆ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಬೇರೆ ಬೇರೆ ನಗರಗಳಲ್ಲಿ ಇನ್ನೂ ಸುಮಾರು 1000 ಮಂದಿ ಭಾರತೀಯ ಪ್ರಜೆಗಳು ಇದ್ದಾರೆ. ಅವರಿರುವ ಸ್ಥಳಗಳನ್ನು ಗುರುತಿಸಿ, ಅವರನ್ನು ಕರೆತರುವುದು ಒಂದು ಸವಾಲಿನ ಕೆಲಸ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಹಾವು-ಏಣಿ ಆಟ: ಮೂರು ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಕ್ಕೆ ಪಡೆದ ಆಫ್ಘನ್ ಪಡೆ