ಕುಪ್ವಾರ(ಜಮ್ಮು ಕಾಶ್ಮೀರ): ನಿತ್ಯದಂತೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಕಮರಿಗೆ ಬಿದ್ದು ಮೂವರು ಸೈನಿಕರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾದ ಮಾಚಲ್ ಸೆಕ್ಟರ್ನ ಮುಂಚೂಣಿ ಪ್ರದೇಶಲ್ಲಿ ಇಂದು ಸಂಭವಿಸಿದೆ. ಮೂವರ ದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.
ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಮತ್ತು ಇಬ್ಬರು ಇತರ ಶ್ರೇಣಿಯ (ಒಆರ್) ಅಧಿಕಾರಿಗಳಿದ್ದ ವಾಹನ ಹಿಮದ ರಾಶಿಯ ಮಧ್ಯೆ ಸಾಗುತ್ತಿದ್ದಾಗ ಆಯತಪ್ಪಿ ಆಳದ ಕಮರಿಗೆ ಬಿದ್ದಿದೆ. ಘಟನೆಯಲ್ಲಿ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಸೇನಾಪಡೆಗಳು, ಮೃತ ಯೋಧರ ಪಾರ್ಥಿವ ಶರೀರಗಳನ್ನು ಕಮರಿಯಿಂದ ಹೊರತಂದಿದ್ದಾರೆ.
ಓದಿ: ನದಿಗೆ ಉರುಳಿ ಬಿದ್ದ ಸೇನಾ ವಾಹನ: 7 ಯೋಧರು ಹುತಾತ್ಮ, 19 ಸೈನಿಕರಿಗೆ ಗಾಯ
ಈ ಬಗ್ಗೆ ಟ್ವೀಟ್ ಮಾಡಿರುವ ಸೇನೆ, ದಿನಂಪ್ರತಿಯಂತೆ ಗಸ್ತು ಕಾರ್ಯಾಚರಣೆ ನಡೆಸುತ್ತಿರುವ ಅವಧಿಯ ವೇಳೆ ಓರ್ವ ಜೂನಿಯರ್, ಇತರ ಇಬ್ಬರು ಅಧಿಕಾರಿಗಳು ಆಯತಪ್ಪಿ ಹಿಮಕಂದಕಕ್ಕೆ ಬಿದ್ದು ಹುತಾತ್ಮರಾಗಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಸಿಕ್ಕೀಂ ದುರ್ಘಟನೆಯ ಕಹಿ ನೆನಪು: ಭಾರತ ಚೀನಾ ಗಡಿಯ ಸಮೀಪದ ಉತ್ತರ ಸಿಕ್ಕೀಂನಲ್ಲಿ ಗಡಿ ಗಸ್ತು ವೇಳೆಯೂ ಸೇನಾ ವಾಹನ ಕಮರಿಗೆ ಬಿದ್ದು 16 ಮಂದಿ ಯೋಧರು ಹುತಾತ್ಮರಾಗಿದ್ದರು. ನಾಲ್ವರು ಗಂಭೀರ ಗಾಯಗೊಂಡಿದ್ದ ಕಹಿಘಟನೆ ಕಳೆದ ವರ್ಷದ ಡಿಸೆಂಬರ್ 23 ರಂದು ನಡೆದಿತ್ತು. ಇದಾದ 22 ದಿನಗಳ ಅಂತರದಲ್ಲಿ ಮತ್ತೊಂದು ಸೇನಾ ವಾಹನ ದುರಂತ ಘಟಿಸಿದೆ.
ಸಿಕ್ಕೀಂನ ಗ್ಯಾಂಗ್ಟಾಕ್ ಗಡಿ ಭಾಗದ ಪೋಸ್ಟ್ಗಳತ್ತ 20 ಯೋಧರಿದ್ದ ವಾಹನ ಸಾಗುತ್ತಿದ್ದಾಗ ಆಯತಪ್ಪಿ ನೂರಾರು ಅಡಿ ಆಳದ ಕಮರಿಗೆ ಬಿದ್ದಿತ್ತು. ಪರಿಣಾಮ 16 ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಗಾಯಾಳುಗಳನ್ನು ಬಂಗಾಳದ ಆಸ್ಪತ್ರೆಗೆ ರವಾನಿಸಲಾಗಿತ್ತು.