ಉನಾ(ಹಿಮಾಚಲ ಪ್ರದೇಶ): ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗ್ಯಾಗ್ರೆಟ್ ವಿಧಾನಸಭಾ ಕ್ಷೇತ್ರದ ನಕ್ರೋಹ್ ಗ್ರಾಮದ ಮೇಲೆ ಹಾರುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಸೋಮವಾರ ಬೆಳಗ್ಗೆ 7:45 ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿದೆ. ಹಳ್ಳಿಗರು ಆರಂಭದಲ್ಲಿ ತಮ್ಮ ಗ್ರಾಮದಲ್ಲಿ ಹೆಲಿಕಾಪ್ಟರ್ ತುರ್ತಾಗಿ ಭೂಮಿ ಸ್ಪರ್ಶಿಸುತ್ತಿರುವುದರಿಂದ ಗಾಬರಿಗೊಂಡಿದ್ದರು. ಪೈಲಟ್ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೆಲಿಕಾಪ್ಟರ್ ಭೂ ಸ್ಪರ್ಶದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದರು. ಏನಾಯಿತು ಎಂಬುದರ ಬಗ್ಗೆ ಸೇನಾ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಸೇನೆಯ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದೋಷಪೂರಿತ ಕಾಪ್ಟರ್ಅನ್ನು ಸರಿಪಡಿಸಿದರು.
ಈ ವಿಷಯದ ಕುರಿತು ಮಾತನಾಡಿದ ಎಡಿಸಿ ಡಾ. ಅಮಿತ್ ಶರ್ಮಾ, ಕೆಲವು ತಾಂತ್ರಿಕ ದೋಷದಿಂದ ಸೇನಾ ಹೆಲಿಕಾಪ್ಟರ್ ಇಲ್ಲಿ ಇಳಿದಿದೆ. ಸೇನೆಯ ಪೈಲಟ್‌ಗಳು ಮತ್ತು ಇತರ ಸಿಬ್ಬಂದಿ ತಾಂತ್ರಿಕ ದೋಷವನ್ನು ಸರಿಪಡಿಸಿದ್ದಾರೆ. ವಾಯುಪಡೆ ಕೂಡ ಸಹಾಯಕ್ಕಾಗಿ ತಲುಪಿದೆ. ತುರ್ತು ಪರಿಸ್ಥಿತಿ ಲ್ಯಾಂಡಿಂಗ್ ಯಶಸ್ವಿಯಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಬಳಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ಗೆ ಬೆಂಕಿ, ಸ್ಫೋಟ - ಭೀಕರ ವಿಡಿಯೋ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಗ್ಗೆ ಅವರು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಸೇನೆಯ ಹೆಲಿಕಾಪ್ಟರ್ ಆಕಾಶದಲ್ಲಿ ಸುತ್ತುತ್ತಿರುವುದು ಕಂಡುಬಂತು. ಈ ಸಂದರ್ಭದಲ್ಲಿ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಖಾಲಿ ಮೈದಾನದಲ್ಲಿ ಇಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.