ನವದೆಹಲಿ: ವಾಯವ್ಯ ದೆಹಲಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು 1.3 ಕೋಟಿ ರೂಪಾಯಿ ನಗದು ಹಾಗೂ 2 ಕೆ.ಜಿ ಚಿನ್ನ ದೋಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಮುಸುಕುಧಾರಿ ದರೋಡೆಕೋರರು ಮನೆಯ ಕಿಟಕಿ ಗ್ರಿಲ್ಗಳನ್ನು ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ಅಶೋಕ್ ವಿಹಾರ್ 2 ನೇ ಹಂತದಲ್ಲಿ ವಾಸಿಸುವ ಉದ್ಯಮಿ ಪೇಪರ್ ವ್ಯಾಪಾರ ನಡೆಸುತ್ತಿದ್ದಾರೆ. ಇವರ ತಂದೆ ಗುತ್ತಿಗೆದಾರರು ಎಂದು ತಿಳಿದುಬಂದಿದೆ.
ಬಂದೂಕು ತೋರಿಸಿ ಕುಟುಂಬದ ಸದಸ್ಯರನ್ನು ರೂಂನಲ್ಲಿ ಕೂಡಿಹಾಕಿ, ಚಾಕು ಹಾಗೂ ಗನ್ ಹಿಡಿದು ಚಿನ್ನಾಭರಣ, ಹಣ ಎಲ್ಲಿ ಇಟ್ಟಿದ್ದೀರಿ ಎಂದು ತೋರಿಸುವಂತೆ ಒತ್ತಾಯಿಸಿದ್ದಾರೆ. ಮಧ್ಯಾಹ್ನ 1.30 ರ ವೇಳೆಗೆ ದರೋಡೆಕೋರರು ಮನೆಗೆ ನುಗ್ಗಿದ್ದರು. ಕುಟುಂಬಸ್ಥರನ್ನು ಸುಮಾರು 1 ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹22 ಲಕ್ಷ ಹಗಲು ದರೋಡೆ!- ವಿಡಿಯೋ
ದರೋಡೆಕೋರರು ಮನೆಯಿಂದ ತೆರಳುವ ಮುನ್ನ, ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಆದರೆ ಕುಟುಂಬಸ್ಥರು ಬಿಡಿಸಿಕೊಂಡು ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿ ಹೇಳಿದರು.
ಮನೆಯ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಆರೋಪಿಗಳು 2.45 ರ ಸುಮಾರಿಗೆ ಮನೆಯಿಂದ ಹೊರಹೋಗಿರುವುದು ದಾಖಲಾಗಿದೆ. ಘಟನೆಯ ಕೆಲವು ದಿನಗಳ ಮೊದಲು ದರೋಡೆಕೋರರು ಈ ಪ್ರದೇಶದಲ್ಲಿ ವಿಹಾರ ನಡೆಸಿದ್ದರು ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ರೈಲು ನಿಲ್ದಾಣದಿಂದ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಎರಡು ಬ್ಯಾಗ್‌ಗಳನ್ನು ಹೊತ್ತಿರುವ ಪುರುಷರ ಗುಂಪು ರೈಲು ಹಳಿಗಳ ಮೇಲೆ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆ ಮತ್ತು ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಹಾಳು ಮಾಡಿದ್ದರಿಂದ ಒಳಗಿನವರ ಕೈವಾಡವಿರುವ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿನಿಮೀಯ ರೀತಿ ಕಾರು ಅಡ್ಡಗಟ್ಟಿ ₹97 ಲಕ್ಷ ದರೋಡೆ; 8 ಮಂದಿ ಆರೋಪಿಗಳು ಸೆರೆ
ಅಂತಾರಾಜ್ಯ ಕಳ್ಳರ ಬಂಧನ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನ ದೊಮ್ಮಸಂದ್ರದ ಮುತ್ತಾನಲ್ಲೂರು ಕ್ರಾಸ್ನ ಹೆಚ್ಡಿಎಫ್ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 60 ಲಕ್ಷ ರೂ ಮೌಲ್ಯದ ವಜ್ರ ಮತ್ತು ಚಿನ್ನದ ಒಡವೆಗಳನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸರ್ಜಾಪುರ ಇನ್ಸ್ಪೆಕ್ಟರ್ ಎಸ್.ಎಸ್.ಮಂಜುನಾಥ್ ನೇತೃತ್ವದ ತಂಡ ಇತ್ತೀಚೆಗೆ ಬಂಧಿಸಿತ್ತು. ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾವೇಟಿಪುರಂ ಓಟಿ ಕುಪ್ಪಂ ಗ್ರಾಮದ ಪಾಂಡುರಂಗ(44) ಮತ್ತು ಅಂಕಯ್ಯ(20) ಎಂದು ಗುರುತಿಸಲಾಗಿದೆ. ಚೆನ್ನೈ ಮೂಲದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕಾರಿನ ಕಿಟಕಿ ಗಾಜು ಒಡೆದು ಚಿನ್ನಾಭರಣ ದರೋಡೆ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ