ಡೆಹ್ರಾಡೂನ್: ಜನವರಿ 2022 ರ ಹೊತ್ತಿಗೆ ಭಾರತವು ಸೂರ್ಯನ ಅಧ್ಯಯನಕ್ಕಾಗಿ ತನ್ನ ಮೊದಲ ಸೌರ ಮಿಷನ್ ಆದಿತ್ಯ ಎಲ್ -1 ಅನ್ನು ಪ್ರಾರಂಭಿಸಲಿದೆ. ಇಸ್ರೋ ಪ್ರಕಾರ, ಈ ಕಾರ್ಯಾಚರಣೆಯ ಉದ್ದೇಶವು ಯಾವುದೇ ಅಡೆತಡೆಗಳಿಲ್ಲದೇ ಸೂರ್ಯನ ಮೇಲೆ ಶಾಶ್ವತವಾಗಿ ಕಣ್ಣಿಡುವುದಾಗಿದೆ.
ವೆಬ್ ಇಂಟರ್ಫೇಸ್ನಲ್ಲಿ ಭಾರತದ ಮೊದಲ ಸೌರ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಪಡೆದ ಡೇಟಾ ಸಂಗ್ರಹಿಸಲು ಸಮುದಾಯ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ವಿಜ್ಞಾನಿಗಳು ಈ ಡೇಟಾವನ್ನು ತಕ್ಷಣವೇ ನೋಡಬಹುದಾಗಿದೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಬಹುದಾಗಿದೆ. ಈ ಕೇಂದ್ರಕ್ಕೆ ಆದಿತ್ಯ ಎಲ್ 1 ಸಪೋರ್ಟ್ ಸೆಲ್ (ಎಎಲ್ 1 ಎಸ್‌ಸಿ) ಎಂದು ಹೆಸರಿಡಲಾಗಿದೆ.
ಈ ಕೇಂದ್ರವನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಇಸ್ರೋ ಮತ್ತು ಆರ್ಯಭಟ ರಿಸರ್ಚ್ ಇನ್ಸಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸಸ್ ಜಂಟಿಯಾಗಿ ನಿರ್ಮಿಸಿವೆ. ಈ ಕೇಂದ್ರವನ್ನು ಅತಿಥಿ ವೀಕ್ಷಕರು ವೈಜ್ಞಾನಿಕ ದತ್ತಾಂಶಗಳ ವಿಶ್ಲೇಷಣೆ ಮತ್ತು ವಿಜ್ಞಾನ ವೀಕ್ಷಣಾ ಪ್ರಸ್ತಾಪಗಳ ತಯಾರಿಕೆಗಾಗಿ ಬಳಕೆ ಮಾಡುತ್ತಾರೆ.
ಈ ಕೇಂದ್ರವು ವಿಶ್ವದ ಇತರ ಬಾಹ್ಯಾಕಾಶ ವೀಕ್ಷಣಾಲಯಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಸೌರ ಕಾರ್ಯಾಚರಣೆಗೆ ಸಂಬಂಧಿಸಿದ ಡೇಟಾವನ್ನು ಇದು ಒದಗಿಸುತ್ತದೆ. ಈ ಕೇಂದ್ರವು ಆದಿತ್ಯ ಎಲ್ 1 ನಿಂದ ಪಡೆದ ಡೇಟಾವನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಇತರ ದೇಶಗಳಲ್ಲಿಯೂ ಪ್ರವೇಶಿಸುವಂತೆ ಮಾಡುತ್ತದೆ. ಇದರೊಂದಿಗೆ, ಹೆಚ್ಚು ಹೆಚ್ಚು ಜನರು ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಪ್ರತಿಯೊಬ್ಬ ಆಸಕ್ತ ವ್ಯಕ್ತಿಗೆ ಡೇಟಾದ ವೈಜ್ಞಾನಿಕ ವಿಶ್ಲೇಷಣೆ ಮಾಡಲು ಇದು ಅನುವು ಮಾಡಿಕೊಡುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ. ಶಿವನ್ ಮಾತನಾಡಿದ್ದು, ಆದಿತ್ಯ ಎಲ್ -1 ಮಿಷನ್ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ 1 (ಎಲ್ -1) ಸುತ್ತಲಿನ ಹಾಲೋ ಕಕ್ಷೆಗೆ ಪ್ರವೇಶಿಸಲಿದ್ದು, ಇದರಿಂದಾಗಿ ಸೂರ್ಯನನ್ನು ಯಾವುದೇ ಅಡೆತಡೆ ಇಲ್ಲದೇ ನಿರಂತರವಾಗಿ ವೀಕ್ಷಿಸಬಹುದು ಎಂದಿದ್ದಾರೆ.
ಏನಿದು ಏರಿಯಸ್(ARIES)?
ಇನ್ನು ಆರ್ಯಭಟ ರಿಸರ್ಚ್ ಇನ್ಸಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸಸ್ (ARIES) ನೈನಿತಾಲ್‌ನ ಮನೋರಾ ಶಿಖರದಲ್ಲಿದೆ. ಇದು ಖಗೋಳಶಾಸ್ತ್ರವನ್ನು ಅಧ್ಯಯನ ಮಾಡಲು ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಈ ಆರ್ಯಭಟ ವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆ ಯನ್ನು ಉತ್ತರ ಪ್ರದೇಶ ಸರ್ಕಾರವು ವಾರಾಣಸಿಯಲ್ಲಿ 20 ಏಪ್ರಿಲ್ 1954 ರಂದು 'ಉತ್ತರ ಪ್ರದೇಶ ರಾಜ್ಯ ವೀಕ್ಷಣಾಲಯ' ಹೆಸರಿನಲ್ಲಿ ಸ್ಥಾಪನೆ ಮಾಡಿದೆ.
ಇದರ ನಂತರ, ನೈನಿತಾಲ್ ಅನ್ನು 1955 ರಲ್ಲಿ ಮತ್ತು 1961 ರಲ್ಲಿ ಈಗಿನ ಮನೋರಾ ಶಿಖರದಲ್ಲಿ ಸ್ಥಾಪಿಸಲಾಗಿದೆ. 2000 ರಲ್ಲಿ ಇದನ್ನು ರಾಜ್ಯ ವೀಕ್ಷಣಾಲಯ ಎಂದು ಕರೆಯಲಾಯಿತು. ಇದಾದ ನಂತರ 2 ರ ಮಾರ್ಚ್ 2004 ರಂದು ಇದನ್ನು ಭಾರತ ಸರ್ಕಾರದ ಅಡಿ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ.