ಮಥುರಾ (ಯುಪಿ): ಶ್ರೀ ಕೃಷ್ಣ ಜನ್ಮಭೂಮಿ ಈದ್ಗಾ ಸಂಕೀರ್ಣದಲ್ಲಿ ಡಿ. 6ರಂದು ಲಡ್ಡು ಗೋಪಾಲನ 'ಜಲಾಭಿಷೇಕ' ಮತ್ತು 'ಹನುಮಾನ್ ಚಾಲೀಸಾ' ಪಠಣ ಮಾಡಲು ಅವಕಾಶ ನೀಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಮನವಿ ಸಲ್ಲಿಸಿದೆ.
ಈ ವರ್ಷ ಬಾಬರಿ ಮಸೀದಿ ಧ್ವಂಸದ 30ನೇ ವರ್ಷಾಚರಣೆ ಜೊತೆಗೆ ಮುಂದಿನ ವರ್ಷ ಮಹಾಸಭಾ ಮತ್ತು ಮುನ್ಸಿಪಲ್ ಚುನಾವಣೆಯ ಘೋಷಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ ಜನವರಿ 28ರವೆರೆಗೆ ಮಥುರಾದಲ್ಲಿ ಸಭೆ ಹಾಗೂ ಪ್ರದರ್ಶನಗಳನ್ನು ನಡೆಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪುಲ್ಕಿತ್ ಖರೆ ನಿಷೇಧಾಜ್ಞೆ ಹೊರಡಿಸಿ, ಆದೇಶ ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಇದರ ಬೆನ್ನಲ್ಲೇ ಶುಕ್ರವಾರ, ಮಹಾಸಭಾದ ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ಸಂಕೀರ್ಣದಲ್ಲಿ ಹನುಮಾನ್ ಚಾಲೀಸ್ ಪಠಿಸಲು ಅನುಮತಿ ನೀಡುವಂತೆ ಕೋರಿ ತಮ್ಮ ರಕ್ತದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ವಿಡಿಯೋದಲ್ಲಿ, ಹನುಮಾನ್ ಚಾಲೀಸಾ ಪಠಿಸಲು ನಿಮಗೆ ಅನುಮತಿ ನೀಡಲು ಸಾಧ್ಯವಾಗದಿದ್ದರೆ, ದಯಾಮರಣಕ್ಕೆ ಅನುಮತಿ ನೀಡಿ. ಯಾಕೆಂದರೆ ನಮ್ಮ ವಿಗ್ರಹವನ್ನು ಪೂಜಿಸಲು ಸಾಧ್ಯವಾಗದಿದ್ದ ಮೇಲೆ ನಾವು ಬದುಕಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕೃಷ್ಣ ಜನ್ಮಭೂಮಿ ದೇಗುಲದ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆಯುತ್ತಿವೆ.
ಇದನ್ನೂ ಓದಿ: ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಕೇಸ್: ಇತ್ಯರ್ಥಕ್ಕೆ 4 ತಿಂಗಳ ಗಡುವು ನೀಡಿದ ಕೋರ್ಟ್