ಚೆನ್ನೈ(ತಮಿಳುನಾಡು): ಚೆನ್ನೈನಲ್ಲಿರುವ ಅಪೊಲೋ ಆಸ್ಪತ್ರೆ 93 ವರ್ಷದ ರೋಗಿಯೋರ್ವನಿಗೆ ರೋಬೋಟ್ ಸಹಾಯದಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ರೋಬೋಟಿಕ್ಸ್ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಆಸ್ಪತ್ರೆಯ ವೈದ್ಯ ಡಾ.ಎಂ.ಎಂ.ಯೂಸುಫ್ ಹಾಗೂ ತಂಡ ಘೋಷಣೆ ಮಾಡಿದೆ. 93 ವರ್ಷದ ರೋಗಿಯ ಮೇಲೆ ರೋಬೋಟಿಕ್ ಅಸಿಸ್ಟೆಡ್ ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಮಾಡುವ ಮೂಲಕ ಮೈಲಿಗಲ್ಲು ಸೃಷ್ಟಿಸಿದೆ.
ಅಪೊಲೋ ಆಸ್ಪತ್ರೆ ಕಳೆದ ಕೆಲ ತಿಂಗಳಲ್ಲಿ 70 ವರ್ಷ ಮೇಲ್ಪಟ್ಟ ಅನೇಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದರಲ್ಲಿ 80 ವರ್ಷಕ್ಕಿಂತಲೂ ಮೇಲ್ಪಟ್ಟ ಸುಮಾರು 10 ರೋಗಿಗಳಿದ್ದಾರೆ. ಆದರೆ, 93 ವರ್ಷದ ರೋಗಿಗೆ ರೋಬೋಟ್ ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ರೋಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆಂದು ಆಸ್ಪತ್ರೆ ತಿಳಿಸಿದೆ. ರೊಬೊಟಿಕ್ ಅಸಿಸ್ಟ್ ಅತ್ಯಂತ ಕಡಿಮೆ ಪ್ರಮಾಣದ ಹೃದಯ ಶಸ್ತ್ರಚಿಕಿತ್ಸೆ ವಿಧಾನವಾಗಿದ್ದು, ಎದೆಯಲ್ಲಿ ಸಣ್ಣ ರಂಧ್ರ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: 'ಭಾರತಕ್ಕೆ ಬರಲು ಅವಕಾಶ ನೀಡಿ': PoKಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯಿಂದ ಮೋದಿಗೆ ಮನವಿ
ಅಪೊಲೋ ಆಸ್ಪತ್ರೆ ಗ್ರೂಪ್ ವ್ಯವಸ್ಥಾಪಕಿ ನಿರ್ದೇಶಕ ಶ್ರೀಮತಿ ಸುನೀತಾ ರೆಡ್ಡಿ ಮಾತನಾಡಿದ್ದು, ರೋಗಿಗಳ ಅನುಕೂಲಕ್ಕಾಗಿ ಭಾರತ ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನ ಪರಿಚಯ ಮಾಡ್ತಿದೆ. ಅಪೊಲೋ ಆಸ್ಪತ್ರೆ ಅತ್ಯಾಧುನಿಕ ಮತ್ತು ವೈದ್ಯಕೀಯ ಚಿಕಿತ್ಸೆ ಮೂಲಕ ಜನರಿಗೆ ಕೈಗೆಟುಕುವ ದರ್ಜೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದೇವೆ ಎಂದರು.