ನವದೆಹಲಿ: ಅರುಣಾಚಲ ಪ್ರದೇಶದ ಮಾಜಿ ಸಿಎಂ ಕಲಿಖೋ ಪುಲ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡಲಾಗಿದೆ.
ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾಗೊಳಿಸಿದೆ.
ಸ್ವತಃ ಪುಲ್ ಅವರ ಪತ್ನಿಯೇ 2017ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಕೆಲ ದಿನಗಳ ನಂತರ ರಾಷ್ಟ್ರಪತಿಗಳನ್ನು ಸಂಪರ್ಕಿಸಿ ಅವರಿಗಿದ್ದ ಅಧಿಕಾರ ಬಳಸಿ, ಪ್ರಕರಣವನ್ನು ಹಿಂಪಡೆದಿದ್ದರು. ಈಗ ಪುಲ್ ಅವರಿಗೆ ಸಂಬಂಧಪಡದ ವ್ಯಕ್ತಿಯೊಬ್ಬರು ಪಿಐಎಲ್ ಸಲ್ಲಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ.. ಮುಂದುವರಿದ ಹಿಂಸಾಚಾರ
ಪುಲ್ ಅವರು 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬಿಟ್ಟು ಹೋದ ಡೆತ್ನೋಟ್ನಲ್ಲಿ ಹಲವರ ಹೆಸರುಗಳನ್ನು ಬರೆಯಲಾಗಿತ್ತು. ಇದರಿಂದಾಗಿ ನ್ಯಾಯಾಲಯವು ರಾಷ್ಟ್ರಪತಿಗಳು ಈ ವಿಚಾರದಲ್ಲಿ ಪ್ರಾತಿನಿಧ್ಯ ವಹಿಸಬೇಕೆಂದು ಕೇಳಿಕೊಂಡಿತ್ತು. ಆದರೆ ಮುಂದೆ ಈ ಪ್ರಕರಣದಲ್ಲಿ ಯಾವುದೇ ಮಹತ್ತರವಾದ ಬದಲಾವಣೆಗಳು ಆಗಲಿಲ್ಲ ಎಂದು ವಕೀಲರಾದ ಸಿದ್ದಾರ್ಥ್ ದೇವ್ ಹೇಳಿದ್ದಾರೆ.
ಮಾಜಿ ಸಿಎಂ ಕಲಿಖೋ ಪುಲ್ ಒಂದಿಷ್ಟು..
ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಕಲೀಖೋ ಫುಲ್ 2016ರಲ್ಲಿ ಬಂಡಾಯ ಅಭ್ಯರ್ಥಿಗಳ ನೆರವಿನಿಂದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆದರೆ ಸುಪ್ರೀಂಕೋರ್ಟ್, ವಿಧಾನಸಭೆ ಕಾನೂನುಬಾಹಿರವಾಗಿದ್ದು, ಅದನ್ನು ವಿಸರ್ಜಿಸಬೇಕು ಎಂದು ರಾಜ್ಯಪಾಲರಿಗೆ ಆದೇಶ ಹೊರಡಿಸಿತ್ತು.
ಇದೇ ಕಾರಣದಿಂದಾಗಿ ಕಲಿಖೋ ಪುಲ್ ಅಧಿಕಾರದಿಂದ ಇಳಿಯಬೇಕಾಗಿತ್ತು. ಇದಾದ ಕೆಲವು ದಿನಗಳ ನಂತರ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಇನ್ನೂ ಹಲವರಲ್ಲಿ ಅನುಮಾನಗಳಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿದ್ದ ಪಿಐಎಲ್ ಅನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.