ಪತ್ತನಂತಿಟ್ಟ( ಕೇರಳ): ಇಡೀ ದೇಶದಲ್ಲಿ ವೈಯಕ್ತಿಕ ಅಂಚೆ ಕಚೇರಿ ವ್ಯವಸ್ಥೆಯನ್ನು ನೀಡಿರುವುದು ಇಬ್ಬರಿಗೆ ಮಾತ್ರವೇ. ಅದರಲ್ಲಿ ಮೊದಲನೆಯದು ರಾಷ್ಟ್ರಪತಿಗಳಾದರೆ, ಮತ್ತೊಂದು ಶಬರಿಮಲೆಯ ದೇವರು ಅಯ್ಯಪ್ಪನಿಗೆ. ಅಯ್ಯಪ್ಪನಿಗೆ ಇರುವ ಈ ಅಂಚೆ ಸೇವೆಯನ್ನು ವರ್ಷದಲ್ಲಿ ಮೂರು ತಿಂಗಳು ಮಾತ್ರ ಚಾಲನೆಯಲ್ಲಿರಲಿದೆ. 689713 ಇದು ಶಬರಿಮಲೆ ಅಯ್ಯಪ್ಪನ ಅಂಚೆ ಕಚೇರಿ ಪಿನ್ ಕೋಡ್ ಆಗಿದೆ.
ಈ ಅಂಚೆ ಸೇವೆಯಲ್ಲಿ ವಿಶೇಷ ಸವಲತ್ತು ಕೂಡ ಇದೆ. ಇಲ್ಲಿನ ಅಂಚೆ ಸೀಲ್ನಲ್ಲಿ ಅಯ್ಯಪ್ಪನ 18 ಪವಿತ್ರ ಮೆಟ್ಟಿಲು ಮತ್ತು ಅಯ್ಯಪ್ಪ ದೇವರ ಚಿತ್ರವನ್ನು ಕಾಣಬಹುದು. ಇಲ್ಲಿನ ಪತ್ರ ವ್ಯವಹಾರಕ್ಕಾಗಿ ಅಂಚೆ ಇಲಾಖೆ ಈ ವಿಶೇಷ ಪೋಸ್ಟಲ್ ಸೀಲ್ ಅನ್ನು ಬಳಕೆ ಮಾಡುತ್ತದೆ.
ಈ ವಿಶೇಷ ಪೋಸ್ಟಲ್ ಸೀಲ್ಗಾಗಿಯೇ ಇಲ್ಲಿನ ಅನೇಕ ಭಕ್ತಾದಿಗಳು, ತಮ್ಮ ಮನೆಗೆ ಪತ್ರ ಕಳುಹಿಸಲು ಇಲ್ಲಿನ ಅಂಚೆ ಕಚೇರಿ ಮುಂದೆ ಸಾಲು ನಿಲ್ಲುತ್ತಾರೆ. ಅಯ್ಯಪ್ಪ ದೇವರ ದರ್ಶನ ಸೌಲಭ್ಯ ಮುಗಿದ ಬಳಿಕ ಅಂದರೆ, ಸೀಸನ್ ಆದ ಬಳಿಕ ಈ ಪೋಸ್ಟಲ್ ಸೀಲ್ ಅನ್ನು ಪತ್ತನಂತಿಟ್ಟು ಅಂಚೆ ಹೆಚ್ಚುವರಿ ಅಧಿಕಾರಿಗಳು ಸುರಕ್ಷಿತವಾಗಿ ಜೋಪಾನ ಮಾಡುತ್ತಾರೆ. ಬಳಿಕ ಮುಂದಿನ ಹಬ್ಬದ ಸೀಸನ್ಗೆ ಈ ಪೋಸ್ಟಲ್ ಸೀಲ್ ಅನ್ನು ತೆರೆಯಲಾಗುವುದು.
ಈ ಅಂಚೆ ಕಚೇರಿಯಲ್ಲಿ ಅಯ್ಯಪ್ಪ ದೇವರಿಗಾಗಿ ಕೂಡ ಅನೇಕ ಪತ್ರಗಳು ಬರುತ್ತವೆ. ದೇವರಿಗೆ ಬೇಡಿಕೆ ಸೇರಿದಂತೆ ಮನವಿ ಪತ್ರಗಳನ್ನು ಕಳುಹಿಸುತ್ತಾರೆ. ಜೊತೆಗೆ ಮದುವೆ ಆಮಂತ್ರಣ, ಗೃಹ ಪ್ರವೇಶ, ಮನಿ ಆರ್ಡರ್ಗಳನ್ನು ಪ್ರಪಂಚದ ವಿವಿಧ ಮೂಲೆಗಳಿಂದ ಕಳುಹಿಸಲಾಗುವುದು. ದೇವರಿಗೆ ಇಲ್ಲಿ ಯಾವ ಮಟ್ಟಿಗೆ ಪತ್ರ ಬರುತ್ತದೆ ಎಂದರೆ ಇಡೀ ವರ್ಷವೇ ಕಳೆದರೂ ಅಷ್ಟು ಸಂಖ್ಯೆಯ ಪತ್ರವನ್ನು ಓದಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ದೇವಸ್ವಂ ಅಧಿಕಾರಿಗಳು. ಈ ಪತ್ತ ಮತ್ತು ಮನಿ ಆರ್ಡರ್ ಅನ್ನು ಶಬರಿಮಲ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಅಂಚೆ ಇಲಾಖೆ ಒಪ್ಪಿಸುತ್ತದೆ.
ಈ ಅಂಚೆ ಕಚೇರಿಯನ್ನು 1963ರಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ವಿಶೇಷ ಪೋಸ್ಟಲ್ ಸೀಲ್ ಅನ್ನು 1974ರಲ್ಲಿ ಪರಿಚಯಿಸಲಾಗಿದೆ. ಈ ಅಂಚೆ ಕಚೇರಿ ಎಲ್ಲಾ ಮೊಬೈಲ್ ಸೇವೆಗಳಿಗೆ ರಿಚಾರ್ಜ್ ಮಾಡುವ ಸೌಲಭ್ಯವನ್ನು ಹೊಂದಿದೆ. ಮನಿ ಆರ್ಡರ್, ಪರ್ಸೆಲ್ ಸರ್ವಿಸ್ ಕಳುಹಿಸುವ ಸೌಲಭ್ಯ ಕೂಡ ಇದೆ. ಒಂಬ್ಬರು ಪೋಸ್ಟ್ ಮಾಸ್ಟರ್ ಮತ್ತು ಇಬ್ಬರು ಬಹು ಕೌಶಲ್ಯ ಹೊಂದಿರುವ ಸಿಬ್ಬಂದಿಯಿಂದ ಸದ್ಯ ಈ ಅಂಚೆ ಕಚೇರಿ ನಿರ್ವಹಣೆ ನಡೆಯುತ್ತಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ 'ಶಾಲೆಗಾಗಿ ಫುಟ್ಬಾಲ್' ಕಾರ್ಯಕ್ರಮ