ಅನಕಾಪಲ್ಲಿ(ಆಂಧ್ರಪ್ರದೇಶ): ಸರ್ಕಾರಿ ಆಸ್ಪತ್ರೆಗಳಂದ್ರೆ ಬಡವರ ಪಾಲಿಗೆ ಸಂಜೀವಿನಿ ಅಂತಾರೆ. ಆದ್ರೆ, ಆಂಧ್ರಪ್ರದೇಶದ ನರಸೀಪಟ್ನಂನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅನಕಾಪಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಬೇಸತ್ತು ರೋಗಿಗಳು ಕಣ್ಣೀರು ಹಾಕುತ್ತಿದ್ದಾರೆ.
ಏಪ್ರಿಲ್ 6ರಂದು ಸುಮಾರು ಎಂಟು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡ ಕಾರಣ, ಗರ್ಭಿಣಿಯೋರ್ವಳಿಗೆ ಮೇಣದ ಬತ್ತಿ ಮತ್ತು ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ. ಪ್ರತಿದಿನ ವಿದ್ಯುತ್ ಕಡಿತದಂತಹ ಸಮಸ್ಯೆ ಉಂಟಾಗುತ್ತಿರುವ ಕಾರಣ ಇಲ್ಲಿನ ರೋಗಿಗಳು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯಲ್ಲೇ ಅತಿದೊಡ್ಡ ಆಸ್ಪತ್ರೆಯಾಗಿದ್ದರೂ ಕೂಡ, ಮೂಲಭೂತ ಸೌಲಭ್ಯಗಳಿಲ್ಲ. ಜನರೇಟರ್ ಹಾಳಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ರಾತ್ರಿ ವೇಳೆ ವಿದ್ಯುತ್ ಕೈ ಕೊಡುತ್ತಿರುವ ಕಾರಣ ರೋಗಿಗಳ ಸಂಬಂಧಿಕರು ಬ್ಯಾಟರಿ ಚಾಲಿತ ಟೇಬಲ್ ಫ್ಯಾನ್ ತೆಗೆದುಕೊಂಡು ಬರುತ್ತಿದ್ದಾರೆ. ಕೆಲ ದಿನಗಳಿಂದ ಕುಡಿಯುವ ನೀರಿನ ಘಟಕವೂ ಸಹ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಬರುವಂತಾಗಿದೆ.
ಇದನ್ನೂ ಓದಿ: ಆಹಾರ ನೀಡಲು ಹೋದ ಮಗನ ಮೇಲೆ ಆನೆ ದಾಳಿ.. ಎದೆಗುಂದದೆ ಕಂದನನ್ನು ರಕ್ಷಿಸಿದ ತಂದೆ! ವಿಡಿಯೋ
ಈ ವಿಚಾರವಾಗಿ ಮಾತನಾಡಿರುವ ಆಸ್ಪತ್ರೆ ಪ್ರಭಾರಿ ಡಾ.ಡೇವಿಡ್ ವಸಂತ್ ಕುಮಾರ್, ಹೆರಿಗೆ ವಾರ್ಡ್ನಲ್ಲಿ ವಿದ್ಯುತ್ ಇಲ್ಲದ ಕಾರಣ ಟಾರ್ಚ್ ಲೈಟ್, ಸೆಲ್ಫೋನ್ ಬಳಕೆ ಮಾಡಿ ಹೆರಿಗೆ ಮಾಡಿಸಿಕೊಳ್ಳಲಾಗ್ತಿದೆ. ಮುಂದಿನ ಕೆಲ ದಿನಗಳಲ್ಲಿ ಕುಡಿಯುವ ನೀರಿನ ಘಟಕ ಪುನಾರಂಭ ಮಾಡಲಾಗುವುದು ಎಂದರು.