ಮುಂಬೈ: ಉದ್ಯಮಿ ಅಂಬಾನಿ ಮನೆ ಬಳಿ ಸ್ಕಾರ್ಪಿಯೋ ಕಾರ್ನಲ್ಲಿ ಸ್ಫೋಟಕ ಇಟ್ಟಿದ್ದ ಪ್ರಕರಣ ಸಂಬಂಧ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಆಪ್ತ ರಿಯಾಜ್ ಕಾಜಿ ಘಟನೆಯ ಸಾಕ್ಷ್ಯಗಳನ್ನು ನಾಶಮಾಡಲು ಸಹಾಯ ಮಾಡಿದ್ದಾರೆ ಎಂಬ ಮಾಹಿತಿಯೊಂದು ತಿಳಿದುಬಂದಿದೆ.
ಸ್ಕಾರ್ಪಿಯೋಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಮಾಡಲು ಮುಂಬೈ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಿಯಾಜುದ್ದೀನ್ ಕಾಜಿ ವಿಖ್ರೊಲಿಯ ಕಣ್ಣಮ್ವಾರ್ ನಗರದ ಗ್ಯಾರೇಜ್‌ನಲ್ಲಿ ನೋಡುತ್ತಿರುವ ವಿಡಿಯೊವನ್ನು ಎನ್‌ಐಎ ವಶಪಡಿಸಿಕೊಂಡಿದೆ.
ಈ ವಿಡಿಯೋದಲ್ಲಿ ಕಾಜಿಯವರು ಗ್ಯಾರೇಜ್‌ನಲ್ಲಿರುವ ಸಿಸಿಟಿವಿಯ ಡಿವಿಆರ್ ಅನ್ನು ತೆಗೆದುಕೊಂಡು ಗ್ಯಾರೇಜ್ ಮಾಲೀಕರನ್ನು ವಿಚಾರಣೆಗೆ ಕರೆದೊಯ್ಯುವುದನ್ನು ಕಾಣಬಹುದು. ವಾಜೆ ಇದೇ ಗ್ಯಾರೇಜ್‌ನಲ್ಲಿ ವಾಹನದ ನಕಲಿ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿದ್ದರು.
ಮಿಥಿ ನದಿಯಿಂದ ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡ ನಂಬರ್ ಪ್ಲೇಟ್‌ಗಳಲ್ಲಿ ಒಂದು ಔರಂಗಾಬಾದ್‌ನ ಕಾರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. (MH 20-FP-1539) ಈ ಕಾರು ಔರಂಗಾಬಾದ್ ನಿವಾಸಿ ವಿಜಯ್ ನಾಡೆ ಎಂಬುವವರಿಗೆ ಸೇರಿದ್ದಾಗಿದ್ದು, 2020 ನವೆಂಬರ್ 16 ರಂದು ಉದ್ಧವ್ ರಾವ್ ಪಾಟೀಲ್ ಚೌಕ್ನಿಂದ ಕಾಣಿಯಾಗಿತ್ತು.
ರಾಷ್ಟ್ರೀಯ ತನಿಖಾ ದಳದ ಪ್ರಕಾರ, ಮನ್ಸುಖ್ ಹಿರೆನ್ ಅವರು ಸ್ಕಾರ್ಪಿಯೋ ಕಾರಿನ ಕೀಲಿಗಳನ್ನು ಸಚಿನ್ ವಾಜೆಗೆ ಹಸ್ತಾಂತರಿಸಿದ್ದರು, ವಿಖ್ರೋಲಿ ಹೆದ್ದಾರಿಯಲ್ಲಿ ನಿಲ್ಲಿಸಿ ಹೋಗಿದ್ದರು. ಮರುದಿನ ಕಾರು ಕಳ್ಳತನದ ದೂರನ್ನು ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸುವಂತೆ ವಾಜೆ ಮನ್ಸುಖ್ಗೆ ಹೇಳಿದ್ದರು. ಅಲ್ಲದೇ ಕಾರು ಕಳ್ಳತನ ಪ್ರಕರಣ ದಾಖಲಿಸಲು ವಿಖ್ರೋಲಿ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಎನ್‌ಐಎ ಆರೋಪಿಸಿದೆ.