ನವದೆಹಲಿ: ಈಗಾಗಲೇ ಈ ವರ್ಷದಲ್ಲಿ ಎರಡು-ಮೂರು ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಭಾರತದ ದೊಡ್ಡ ದೊಡ್ಡ ಉತ್ಪಾದನಾ ಮತ್ತು ಗ್ರಾಹಕ ಸರಕುಗಳ ಕಂಪನಿಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಮತ್ತೊಂದು ಸುತ್ತಿನ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.
'ಬೆಲೆ ಏರಿಕೆ ಅನಿವಾರ್ಯ' ಎಂದು ಅನೇಕ ಕಂಪನಿಗಳು ಹೇಳಿವೆ. ಫಾಸ್ಟ್ ಮೂವಿಂಗ್ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ಕಂಪನಿಗಳು ಮುಂದಿನ ಮೂರು ತಿಂಗಳುಗಳಲ್ಲಿ ಮಾರಾಟವನ್ನು ತಗ್ಗಿಸಬಹುದಾದರೂ ಬೆಲೆಗಳನ್ನು ಶೇ.4 ರಿಂದ 10ರಷ್ಟು ಹೆಚ್ಚಿಸುವುದಾಗಿ ತಿಳಿಸಿವೆ.
ಇನ್ನು ಗ್ರಾಹಕ ಎಲೆಕ್ಟ್ರಾನಿಕ್ ಕಂಪನಿಗಳು ಈಗಾಗಲೇ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು ಮತ್ತು ಹವಾನಿಯಂತ್ರಣಗಳ ಮೇಲೆ ಈ ತಿಂಗಳು ಶೇ.3-5 ರಷ್ಟು ಬೆಲೆಗಳನ್ನು ಹೆಚ್ಚಿಸಿದ್ದು, ಮುಂದಿನ ತಿಂಗಳಿನಿಂದ ಶೇ.6-10ರಷ್ಟು ಏರಿಕೆ ಮಾಡಲಿವೆ. ಮತ್ತೊಮ್ಮೆ ಬೆಲೆ ಏರಿಕೆ ಮಾಡಿದರೆ ಡಿಸೆಂಬರ್ 2020 ರಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಎಲೆಕ್ಟ್ರಾನಿಕ್ ಗೃಹ ವಸ್ತುಗಳ ದರ ಹೆಚ್ಚಿಸಿ ದಾಖಲೆ ಬರೆದಂತಾಗುತ್ತದೆ.
ಇತ್ತ ದೇಶದ ವಾಹನ ತಯಾರಕರು ಕೂಡ ಬೆಲೆ ಏರಿಕೆಯನ್ನು ಜಾರಿಗೆ ತಂದಿದ್ದು, ಕೋಕಿಂಗ್ ಕಲ್ಲಿದ್ದಲು ಮತ್ತು ಇತರ ಇನ್‌ಪುಟ್ ವೆಚ್ಚಗಳು ಸ್ವಲ್ಪ ಕಡಿಮೆಯಾಗಿದ್ದರೂ ಸಹ ಮತ್ತಷ್ಟು ಬೆಲೆ ಹೆಚ್ಚಿಸಬಹುದು ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: 2022ಕ್ಕೆ ದಾಖಲೆ ಮಟ್ಟದಲ್ಲಿ ಸಿಮೆಂಟ್ ಬೆಲೆ ಏರಿಕೆ ಸಾಧ್ಯತೆ: ಕ್ರಿಸಿಲ್
ಈಗಾಗಲೇ ಡಾಬರ್ ಕಂಪನಿ ತನ್ನ ವಸ್ತುಗಳಿಗೆ ಶೇ.4ರಷ್ಟು ಬೆಲೆ ಏರಿಕೆ ಮಾಡಿದೆ. ಹಣದುಬ್ಬರ ಕಡಿಮೆಯಾಗದಿದ್ದರೆ, ನಾಲ್ಕನೇ ತ್ರೈಮಾಸಿಕದಲ್ಲಿ ನಾವು ಮತ್ತೊಂದು ಸುತ್ತಿನ ಬೆಲೆ ಏರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಾಬರ್ ಸಿಇಒ ಮೋಹಿತ್ ಮಲ್ಹೋತ್ರಾ ಹೇಳಿದ್ದಾರೆ.
ಕಚ್ಚಾ ಎಣ್ಣೆ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ದ್ವಿಗುಣಗೊಂಡ ನಂತರ ಹಿಂದೂಸ್ತಾನ್ ಯೂನಿಲಿವರ್, ಬ್ರಿಟಾನಿಯಾ, ಮಾರಿಕೊ ಮತ್ತು ಇತರ ಕಂಪನಿಗಳು ತಮ್ಮ ಸರಕುಗಳಿಗೆ ಕಳೆದ ಎರಡು ತ್ರೈಮಾಸಿಕಗಳಲ್ಲಿ ಶೇ.5-12ರಷ್ಟು ಬೆಲೆ ಹೆಚ್ಚಿಸಿವೆ.
ಉಕ್ಕು, ತಾಮ್ರ, ಅಲ್ಯೂಮಿನಿಯಂ, ಪ್ಲಾಸ್ಟಿಕ್ಗಳಂತಹ ಸರಕುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವುದರೊಂದಿಗೆ ಇನ್‌ಪುಟ್ ವೆಚ್ಚವು ಶೇ.22-23ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 18 ತಿಂಗಳಲ್ಲಿ ಬರೋಬ್ಬರಿ 6 ಬಾರಿ ಬೆಲೆ ಹೆಚ್ಚಿಸಿರುವ ಮಾರುತಿ ಸುಜುಕಿ ಹೊಸ ವರ್ಷದಲ್ಲಿ ಮತ್ತೆ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ. ಹೀರೋ ಮೋಟೋಕಾರ್ಪ್ ತನ್ನ ಶ್ರೇಣಿಯಾದ್ಯಂತ ಮತ್ತೆ 2,000 ರೂ.ವರೆಗೆ ಬೆಲೆಗಳನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ, ಇದು ಜನವರಿ 4 ರಿಂದ ಜಾರಿಗೆ ಬರಲಿದೆ.