ಸೋನಿಪತ್ (ಹರಿಯಾಣ): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದು, ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮತ್ತೋರ್ವ ರೈತ ಮೃತಪಟ್ಟಿದ್ದಾನೆ.
ಪಂಜಾಬ್ನ ಮೊಗಾ ಜಿಲ್ಲೆಯ ಹನ್ಸಾ ಸಿಂಗ್ (72) ಮೃತಪಟ್ಟ ರೈತನಾಗಿದ್ದು, ತೀವ್ರ ಚಳಿಯ ಕಾರಣದಿಂದ ಅಸುನೀಗಿದ್ದಾನೆ ಎಂದು ಭಾವಿಸಲಾಗಿತ್ತು. ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ‘ಅತ್ಯಾಚಾರ ಸಂತ್ರಸ್ತೆಯಾದ ಮಾನಸಿಕ ಅಸ್ವಸ್ತೆಯ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ'
ಮರಣೋತ್ತರ ಪರೀಕ್ಷೆಯ ನಂತರ ಹೃದಯಾಘಾತದಿಂದ ರೈತ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಮೃತದೇಹವನ್ನು ಸಂಬಂಧಿಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈವರೆಗೆ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ 19 ಮಂದಿ ರೈತರು ಮೃತಪಟ್ಟಿದ್ದು, ಪಟ್ಟು ಬಿಡದ ರೈತರು ಕೃಷಿ ಕಾನೂನುಗಳನ್ನುರದ್ದು ಮಾಡಬೇಕೆಂದು ಹೋರಾಟ ಮುಂದುವರೆಸಿದ್ದಾರೆ.