ನವದೆಹಲಿ: ಭಾರತದ ಮೊದಲ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾದ ಅನ್ನಾ ಮಣಿ ಅವರ 104ನೇ ಜನ್ಮದಿನದಂದು ಡೂಡಲ್ ಮೂಲಕ ಗೂಗಲ್ ವಿಶೇಷ ಗೌರವ ಸಲ್ಲಿಸಿದೆ. ಭಾರತೀಯ ಹವಾಮಾನಶಾಸ್ತ್ರಕ್ಕೆ ಇವರು ನೀಡಿರುವ ಕೊಡುಗೆಗಳು ಅಪಾರವಾಗಿವೆ.
1918ರಲ್ಲಿ ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಇವರು ಭೌತಶಾಸ್ತ್ರ ಮತ್ತು ಹವಾಮಾನ ಕ್ಷೇತ್ರಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಕಿರಿಯ ವಯಸ್ಸಿನಲ್ಲೇ ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದು ಚೆನ್ನೈನಿಂದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದರು. ನಂತರ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಸಿ.ವಿ ರಾಮನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್ ಗುಣಲಕ್ಷಣಗಳ ಬಗ್ಗೆ ಸಂಶೋಧನೆಗಳನ್ನೂ ನಡೆಸಿದ್ದಾರೆ.
ಕ್ರಮೇಣ, ಹವಾಮಾನಶಾಸ್ತ್ರವು ಅನ್ನಾ ಅವರನ್ನು ಆಕರ್ಷಿಸಿತು. 1945ರಲ್ಲಿ ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಹವಾಮಾನ ಉಪಕರಣಗಳಲ್ಲಿ ಪರಿಣತಿ ಪಡೆದರು. ಇದಕ್ಕೂ ಮೊದಲು, 1940ರಲ್ಲಿ ಸಂಶೋಧನೆಗಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕರಾದರು ಮತ್ತು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ರಾಕೆಟ್ ಉಡಾವಣೆ, ಹವಾಮಾನ ವೀಕ್ಷಣಾಲಯ ಮತ್ತು ಸಲಕರಣೆ ಗೋಪುರವನ್ನು ಸಂಶೋಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಓಜೋನ್ ಅಸೋಸಿಯೇಷನ್‌ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹವಾಮಾನಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ವಿಶ್ವ ಹವಾಮಾನ ಸಂಸ್ಥೆಯು ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಅನ್ನಾ ಅವರ ಜೀವನವನ್ನು ಪ್ರಕಟಿಸಿ ನೆನಪಿಸಿಕೊಂಡಿದೆ.
ಇದನ್ನೂ ಓದಿ: ಗೂಗಲ್ ಡೂಡಲ್: ಬ್ರಹ್ಮಾಂಡದ ಫೋಟೋಗಳನ್ನು ಪೋಸ್ಟ್ ಮಾಡಿ ಸಂಭ್ರಮಿಸಿದ ಗೂಗಲ್