ಅಹ್ಮದ್ನಗರ/ಮಹಾರಾಷ್ಟ್ರ: ರೈತರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜನವರಿ 30 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.
ಕೇಂದ್ರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಈ ಉಪವಾಸ ಮಾಡಲಾಗುವುದು ಎಂದು ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ. ಅವರು ತಮ್ಮ ಸ್ಥಳೀಯ ಗ್ರಾಮವಾದ ಮಹಾರಾಷ್ಟ್ರದ ರಾಲೇಗಣ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರದೇ ಇರುವುದಕ್ಕಾಗಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಈ ಸಂಬಂಧ ಅವರು ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ, ರಾಮ್‌ಲೀಲಾ ಗ್ರೌಂಡ್ ಮ್ಯಾನೇಜ್‌ಮೆಂಟ್ ಇನ್ನೂ ಅಣ್ಣಾ ಹಜಾರೆ ಅವರಿಗೆ ಉಪವಾಸ ಸತ್ಯಾಗ್ರಹ ನಡೆಸಲು ಸ್ಥಳಾವಕಾಶ ನೀಡಲು ಅನುಮತಿ ನೀಡದ ಕಾರಣ, ಅವರು ತಮ್ಮ ಸತ್ಯಾಗ್ರವನ್ನು ತಮ್ಮ ಸ್ವಗ್ರಾಮ ಸಿದ್ಧಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ. ಜನವರಿ 30 ರಂದು ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದಂದು ಅಣ್ಣಾ ಹಜಾರೆ ಯಾದವ್ ಬಾಬಾ ದೇವಾಲಯದಲ್ಲಿ ತಮ್ಮ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಲಿದ್ದಾರೆ.
ಈ ಮೊದಲು ಅಣ್ಣಾ ಹಜಾರೆ ಅವರು ಡಿಸೆಂಬರ್ 8 ರಂದು ರೈತ ಸಂಘಟನೆಗಳು ಕರೆದ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ಉಪವಾಸ ಕೈಗೊಂಡಿದ್ದರು.
ಇದನ್ನೂ ಓದಿ:ಇಂದು ರೈತರೊಂದಿಗೆ 10ನೇ ಸುತ್ತಿನ ಮಾತುಕತೆ: ಈ ಬಾರಿಯಾದರೂ ಸಿಗುತ್ತಾ ಪರಿಹಾರ