ಮುಂಬೈ(ಮಹಾರಾಷ್ಟ್ರ): ದೊಡ್ಡ ಕಿರಾಣಿ ಅಂಗಡಿಗಳಲ್ಲಿ ಪಾನ್, ಗುಟ್ಕಾ ಮಾರಾಟ, ಸೂಪರ್ ಮಾರ್ಕೆಟ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಿಡಿದೆದ್ದಿದ್ದಾರೆ. ಅಲ್ಲದೇ, ಈ ನೀತಿಯನ್ನು ವಾಪಸ್ ಪಡೆಯದಿದ್ದರೆ ಫೆ.14 ರಿಂದ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಯುವ ಸಮುದಾಯದ ಬಗ್ಗೆ ಕಾಳಜಿ ವಹಿಸಬೇಕು. ಕಿರಾಣಿ ಅಂಗಡಿಗಳಲ್ಲಿ ಪಾನ್, ಗುಟ್ಕಾ ಮಾರಾಟವನ್ನು ತಕ್ಷಣಕ್ಕೆ ನಿಲ್ಲಿಸಬೇಕು. ಸೂಪರ್ ಮಾರ್ಕೆರ್ಟ್ಗಳಲ್ಲಿ ಮದ್ಯ ಮಾರಾಟಕ್ಕೆ ನೀಡಿದ ಅನುಮತಿ ವಾಪಸ್ ಪಡೆಯಬೇಕು ಎಂದು ಅಣ್ಣಾ ಹಜಾರೆ ಅವರು 4 ಬಾರಿ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇಂದು ಮತ್ತೊಂದು ಜ್ಞಾಪನಾ ಪತ್ರ ಬರೆದಿರುವ ಅಣ್ಣಾ ಹಜಾರೆ, ಗುಟ್ಕಾ, ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಲ್ಲಿಸದಿದ್ದರೆ ಫೆ.14ರಿಂದ ರಾಳೇಗಣ ಸಿದ್ಧಿಯಲ್ಲಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
ಇದೇ ಕೊನೆ ಉಪವಾಸ ಸತ್ಯಾಗ್ರಹ: ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಈ ಹಿಂದೆ ಹಲವಾರು ಮಹತ್ತರ ಹೋರಾಟಗಳ ನೇತೃತ್ವ ವಹಿಸಿದ್ದರು. ಸಮಾಜದ ಒಳಿತಿಗಾಗಿ ನಾನು ಈವರೆಗೂ 22 ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದೇನೆ. ಇದು ನನ್ನ ಕೊನೆಯ ಉಪವಾಸ ಸತ್ಯಾಗ್ರಹವಾಗಿರಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ಹಿಜಾಬ್ ಪ್ರಕರಣ: ಸಿಜೆ ನೇತೃತ್ವದಲ್ಲಿ ವಿಶೇಷ ಪೀಠ ರಚನೆ, ನಾಳೆ ಮಧ್ಯಾಹ್ನವೇ ವಿಚಾರಣೆ