ನವದೆಹಲಿ : ಹೊಸ ವರ್ಷದ ದಿನ ಮಧ್ಯರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಯುವತಿ ಸಾವಿನ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿದೆ. ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದಲ್ಲದೆ, ಯುವತಿಯನ್ನು ಎಳೆದೊಯ್ದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವೇಳೆ ಮೃತಪಟ್ಟ ದೆಹಲಿಯ ಅಂಜಲಿ ಎಂಬ ಯುವತಿಯ ಅಂತ್ಯಕ್ರಿಯೆ ಇಲ್ಲಿನ ಶಿವಪುರಿ ಮುಕ್ತಿಧಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ಮಂಗಳವಾರ ನೆರವೇರಿತು. 1 ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇದಕ್ಕೂ ಮುನ್ನ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಲ್ಲಿಂದ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಬಂದೋಬಸ್ತ್ನಲ್ಲಿ ಕೊಂಡೊಯ್ಯಲಾಯಿತು. 50ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಅಂಜಲಿ ಮೃತದೇಹವಿದ್ದ ಆಂಬ್ಯುಲೆನ್ಸ್ ಹಿಂದೆ ಸಾಗಿದವು. ಅಂತ್ಯ ಸಂಸ್ಕಾರದ ವೇಳೆ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಯಾರಿಗೂ ಸ್ಮಶಾನಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ.
ಸ್ಮಶಾನದ ಮೈದಾನದ ಹೊರಗೆ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು. ಈ ವೇಳೆ ಭಿತ್ತಿಪತ್ರಗಳು ಮತ್ತು ಸಂತ್ರಸ್ತೆಯ ಫೋಟೋಗಳನ್ನು ಹಿಡಿದು, ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತ, 'ಜಸ್ಟೀಸ್ ಫಾರ್ ಅಂಜಲಿ' ಎಂಬ ಘೋಷಣೆಗಳನ್ನು ಮೊಳಗಿಸಿದರು. ಅಂದು ರಾತ್ರಿ ಸಂತ್ರಸ್ತೆಯನ್ನು 12 ಕಿ.ಮೀ ದೂರ ಎಳೆದೊಯ್ದಾಗ ಪೊಲೀಸರು ಎಲ್ಲಿದ್ದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಂಜಲಿಗೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು. ಜೊತೆಗೆ ನಿರ್ಲಕ್ಷ್ಯ ತೋರಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕೆಂದು ಸ್ಥಳೀಯ ನಿವಾಸಿ ರಾಂಪಾಲ್ ಆಗ್ರಹಿಸಿದರು.
ಮರಣೋತ್ತರ ಪರೀಕ್ಷೆ ವರದಿ ವಿವರ : ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ತಲೆ, ಬೆನ್ನುಮೂಳೆ, ದೇಹದ ವಿವಿಧ ಭಾಗಗಳಿಗೆ ಉಂಟಾದ ತೀವ್ರತರ ಗಾಯದಿಂದ ರಕ್ತಸ್ರಾವ ಉಂಟಾಗಿದೆ. ಕಾರು ಎಳೆದುಕೊಂಡು ಹೋಗಿರುವುದರಿಂದ ಗಾಯಗಳು ಸಂಭವಿಸಿರಬಹುದು. ಇದರಿಂದಲೇ ಯುವತಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ವರದಿಯಲ್ಲಿ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಯಾವುದೇ ಗಾಯಗಳಿಲ್ಲ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೂಡಾ ಮಾಹಿತಿ ನೀಡಿದ್ದಾರೆ.
ಇನ್ನು, ಆರೋಪಿಗಳು ಅಪಘಾತವೆಸಗಿ ಸುಮಾರು 13 ಕಿ.ಮೀ ದೂರ ಯುವತಿ ಮೃತದೇಹವನ್ನು ಎಳೆದೊಯ್ದಿದ್ದರು. ಬಳಿಕ ಕಾರು ಕಾಂಜವಾಲದ ಜೊಂಟಿ ಗ್ರಾಮದಲ್ಲಿ ಯೂ ಟರ್ನ್ ತೆಗೆದುಕೊಳ್ಳುವಾಗ ಯುವತಿ ಕೈಯನ್ನು ಕಂಡ ಆರೋಪಿಗಳು ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಕಾರಿನಡಿ ಸಿಲುಕಿದ್ದ ಮೃತದೇಹವನ್ನು ಬೇರ್ಪಡಿಸಿ, ರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ಸಂಬಂಧ ಆರೋಪಿಗಳನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದರು.
ಅಂಜಲಿ ಜೊತೆಗಿದ್ದ ಯುವತಿಯ ವಿಚಾರಣೆ : ಅಪಘಾತ ಸಂಭವಿಸಿದಾಗ ಅಂಜಲಿ ಜೊತೆ ಮತ್ತೋರ್ವ ಯುವತಿ ಇದ್ದರು. ಇವರನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈ ಯುವತಿ ಅಪಘಾತವಾದ ಸ್ಥಳದಿಂದ ಗಾಬರಿಯಿಂದ ಓಡಿಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ ದೆಹಲಿಯ ಸುಲ್ತಾನ್‌ಪುರ ನಿವಾಸಿಯಾಗಿದ್ದರು. ಇವರು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬಕ್ಕೆ ಜೀವಾನಾಧಾರವಾಗಿದ್ದರು. ಇಂದು ಅವರ ನಿವಾಸದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.
10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಕೇಜ್ರಿವಾಲ್ : ಮೃತ ಅಂಜಲಿ ಅವರ ತಾಯಿಯೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಅಂಜಲಿ ಸಾವಿಗೆ ನ್ಯಾಯ ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಅವರು ಖಚಿತಪಡಿಸಿದ್ದಾರೆ.
ಸೂಕ್ತ ತನಿಖೆಗೆ ಅಮಿತ್ ಶಾ ಆದೇಶ: ಮೃತ ಯುವತಿಯ ಕುಟುಂಬಸ್ಥರು, ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಹೊಸ ವರ್ಷದಂದು ದೇಶಾದ್ಯಂತ ಅಲೆ ಎಬ್ಬಿಸಿದ ಪ್ರಕರಣದ ಸೂಕ್ತ ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಆದೇಶಿಸಿದ್ದಾರೆ. ತನಿಖೆಯನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಶಾಲಿನಿ ಸಿಂಗ್ ಅವರಿಗೆ ವಹಿಸಲಾಗಿದೆ. ಆದಷ್ಟು ಬೇಗನೇ ತನಿಖೆ ನಡೆಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾರಿನಲ್ಲಿದ್ದ ಬಿಜೆಪಿ ಮುಖಂಡ: ಕಾಂಜಾವಾಲಾ ಕಾರು ಅಪಘಾತ ಪ್ರಕರಣದ ಆರೋಪಿಗಳಲ್ಲಿ ಬಿಜೆಪಿ ಮುಖಂಡರೊಬ್ಬರು ಕಾರಿನಲ್ಲಿದ್ದರು ಎಂಬುದು ಗೊತ್ತಾಗಿದೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದು, ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಜಲಫಿರಂಗಿ ಬಳಸಿದ್ದಾರೆ.
ಇದನ್ನೂ ಓದಿ :'ಕುಡಿದು ವಾಹನ ಓಡಿಸಿದ್ದೆವು, ಯುವತಿ ಸಿಲುಕಿದ್ದು ಗೊತ್ತಿರಲಿಲ್ಲ': ದೆಹಲಿ ದುಷ್ಕೃತ್ಯದ ಆರೋಪಿಗಳ ಹೇಳಿಕೆ