ಮುಂಬೈ:ಮಾಜಿ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಹಣ ವರ್ಗಾವಣೆ ಪ್ರಕರಣದ ಅರ್ಜಿದಾರರಾದ ವಕೀಲೆ ಜಯಶ್ರೀ ಪಾಟೀಲ್ ಅವರು ತಮ್ಮ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ (ಇಡಿ)ಗೆ ನಿನ್ನೆ ಸಲ್ಲಿಸಿದ್ದಾರೆ.
ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ, ಅನೇಕ ಮಾಹಿತಿಯನ್ನು ಪಡೆದುಕೊಂಡಿದೆ. ವಿಚಾರಣೆ ಬಳಿಕ ಮಾತನಾಡಿದ ಜಯಶ್ರೀ, ಹಿರಿಯ ಅಧಿಕಾರಿಗಳ ಮೂಲಕ ಎನ್‌ಸಿಪಿ ಮುಖಂಡೆ ಸುಪ್ರಿಯಾ ಸುಳೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಯಶ್ರೀ ಪಾಟೀಲ ಹಿನ್ನೆಲೆ:
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಕರ್ತವ್ಯದಲ್ಲಿದ್ದಾಗ ವರ್ಗಾವಣೆಯಾದ ನಂತರ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಈ ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ದೇಶಮುಖ್ ರಾಜೀನಾಮೆ ನೀಡಿದ್ದರು. ಈ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ವಕೀಲೆ ಜಯಶ್ರೀ ಪಾಟೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ನ್ಯಾಯಾಲಯ ಈ ತೀರ್ಪನ್ನು ಪ್ರಕಟಿಸಿತ್ತು. ಈ ಹಿಂದೆ ಅವರು ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದರೂ ಮರಾಠಾ ಮೀಸಲಾತಿಯನ್ನು ವಿರೋಧಿಸಿದ್ದಕ್ಕಾಗಿ ಸುದ್ದಿಯಲ್ಲಿದ್ದರು. ಪಾಟೀಲ್ ಪರವಾಗಿ ವಕೀಲ ಗುಣರತ್ನ ಸದಾವರ್ತೆ ಈ ಕುರಿತು ಅರ್ಜಿ ಸಲ್ಲಿಸಿದ್ದರು.