ಸಾಂಗ್ಲಿ(ಮಹಾರಾಷ್ಟ್ರ): ನಗರದಲ್ಲಿ ಕನ್ನಡ ಉದ್ಯಮಿಗಳ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಆಕ್ರೋಶಗೊಂಡ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಅಂಗಡಿಗಳನ್ನು ಸಹ ಧ್ವಂಸಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ದುಷ್ಕರ್ಮಿಗಳು ಅವಮಾನ ಮಾಡಿರುವ ಘಟನೆ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀರಜ್ನಲ್ಲಿ ಸಿಟ್ಟಿಗೆದ್ದ ಶಿವಸೇನಾ ಸೈನಿಕರು ಬೀದಿಗಿಳಿದು ಕರ್ನಾಟಕ ರಾಜ್ಯದ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ.
ಕರ್ನಾಟಕ ರಾಜ್ಯದ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅದೇ ಸಮಯದಲ್ಲಿ, ಶಿವಸೇನಾ ಕಾರ್ಯಕರ್ತರು ಕೆಲವು ಖಾಸಗಿ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಕನ್ನಡ ವ್ಯಾಪಾರಸ್ಥರ ಅಂಗಡಿಗಳ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಇಲ್ಲಿನ ಕನ್ನಡ ವ್ಯಾಪಾರಿಗಳ ಜಾಹೀರಾತು ಫಲಕಗಳನ್ನು ಒಡೆದು ಹಾಕುತ್ತಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್ಇಎಸ್ ಉದ್ಧಟತನ ಪ್ರದರ್ಶಿಸಿದೆ. ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಬೋರ್ಡ್ಗಳಿಗೆ ಮಸಿ ಬಳಿದಿದ್ದಾರೆ. ಹಿಂಸಾಚಾರಕ್ಕೆ ಇಳಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಭಾಗ ಉದ್ಧಟತನ ಪ್ರದರ್ಶಿಸಿದ್ದಾರೆ. ಸಾಂಗ್ಲಿಯಲ್ಲಿ ಸುಮಾರು ಶೇ.50ಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ವೈದ್ಯರ ಆಸ್ಪತ್ರೆಗಳ ಕನ್ನಡ ಫಲಕಗಳಿಗೆ ಮಸಿ ಬಳಿಯುತ್ತಾ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕುತ್ತಿದ್ದಾರೆ.