ತಿರುಪತಿ(ಆಂಧ್ರಪ್ರದೇಶ): ತಿರುಮಲದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅರಣ್ಯ ವಲಯ ಅಧಿಕಾರಿ ತಿಳಿಸಿದ್ದು, ಸುಮಾರು 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ತಿರುಮಲ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು. ಮೊದಲ ಘಾಟ್ ರಸ್ತೆಯ ಆನೆ ಕಮಾನು ಬಳಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ವೇಗವಾಗಿ ಹರಡಿದೆ.
ಟಿಟಿಡಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು 50 ಮಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ನಂದಿಸಲು ಸುಮಾರು 8 ಗಂಟೆ ಬೇಕಾಯಿತು ಎಂದು ತಿರುಮಲ ಅರಣ್ಯ ವಲಯದ ಅಧಿಕಾರಿ ಪ್ರಭಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ. ರಾತ್ರಿ ವೇಳೆ ರಸ್ತೆ ಗೊತ್ತಾಗಬೇಕೆಂಬ ಕಾರಣಕ್ಕೆ ಕಳ್ಳಸಾಗಣೆದಾರರು ಬೆಂಕಿ ಹಚ್ಚಿರಬಹುದು ಎಂದು ಅವರು ಶಂಕಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ಬೆಂಕಿಯನ್ನು ಹಚ್ಚಲು ಬಟ್ಟೆಗಳನ್ನು ಬಳಸಲಾಗಿದೆ ಎಂದು ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ತಿರುಪತಿಯಲ್ಲಿ ಸರ್ವದರ್ಶನ ಟಿಕೆಟ್ಗಳಿಗಾಗಿ ನೂಕುನುಗ್ಗಲು, ಮೂವರಿಗೆ ಗಾಯ