ತಿರುಪತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಾರ್ಗದಲ್ಲಿ ಚಿರತೆ ಹಾವಳಿ ಶುರುವಾಗಿದೆ. ಕಳೆದ ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಆರು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು. ಈ ಘಟನೆಯ ಬೆನ್ನಲ್ಲೇ 15 ವರ್ಷದೊಳಗಿನ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯ ನಂತರ ಪಾದಚಾರಿ ಮಾರ್ಗದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಟ್ಟಕ್ಕೆ ತೆರಳುವ ಪಾದಚಾರಿ ಮಾರ್ಗದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮಾತ್ರ ಚಾರಣ ಮಾಡಲು ಅವಕಾಶವಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತಿಳಿಸಿದೆ. ಈ ಭಾನುವಾರದಿಂದಲೇ ಇದನ್ನು ಜಾರಿಗೊಳಿಸಲಾಗಿದೆ. ಅಲ್ಲದೇ, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ ಎಂದು ಹೇಳಿದೆ.
ಶನಿವಾರ ರಾತ್ರಿ ಅಲಿಪಿರಿ ಸಮೀಪದ ಗಾಳಿಗೋಪುರದಿಂದ ಲಕ್ಷ್ಮೀ ನರಸಿಂಹ ಸ್ವಾಮಿ (ಎಲ್‌ಎನ್‌ಎಸ್) ದೇವಸ್ಥಾನ, 38ನೇ ತಿರುವು ಸೇರಿದಂತೆ ಐದು ಸ್ಥಳಗಳಲ್ಲಿ ಚಿರತೆ ಚಲನವಲನ ಕಾಣಿಸಿಕೊಂಡಿದೆ. ದೇವಸ್ಥಾನಕ್ಕೆ ಹೋಗುವ ಪಾದಚಾರಿ ರಸ್ತೆಯ ಇಂತಹ ಸ್ಥಳಗಳಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ನೆರವಿನೊಂದಿಗೆ ದೇವಾಲಯದ ಆಡಳಿತ ಮಂಡಳಿಯು ಭದ್ರತೆಯನ್ನು ಹೆಚ್ಚಿಸಿದೆ. ವನ್ಯ ಜೀವಿಗಳ ಸಮಸ್ಯೆ ಬಗೆಹರಿಯುವವರೆಗೂ ಯಾತ್ರಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಟಿಟಿಡಿ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಸಹಕಾರ ನೀಡಬೇಕೆಂದು ಟಿಟಿಡಿ ಮನವಿ ಮಾಡಿದೆ.
ಮತ್ತೊಂದೆಡೆ, ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮರೆಡ್ಡಿ ಅವರು ಏಳನೇ ಮೈಲಿನಿಂದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲೇ ತೆರಳಿ ತಪಾಸಣೆ ನಡೆಸಿದರು. ಅಲ್ಲದೇ, ರಸ್ತೆ, ಪಾದಚಾರಿ ಮಾರ್ಗ ಮತ್ತು ಘಾಟ್‌ನಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಟಿಟಿಡಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಅವರು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಅಲಿಪಿರಿ ಪಾದಚಾರಿ ಮಾರ್ಗದ ಮೂಲಕ ಶುಕ್ರವಾರ ರಾತ್ರಿ ತಿರುಮಲಕ್ಕೆ ತೆರಳುತ್ತಿದ್ದ ಆರು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಲಕ್ಷಿತಾ ಎಂಬ ಬಾಲಕಿ ತನ್ನ ಪೋಷಕರಾದ ದಿನೇಶ್ ಮತ್ತು ಶಶಿಕಲಾ ಅವರಿಗಿಂತ ತುಂಬಾ ಮುಂದೆ ನಡೆದುಕೊಂಡು ಹೋಗುತ್ತಿದ್ದಳು. ನಂತರ ಆಕೆ ಕಾಣೆಯಾಗಿದ್ದಳು. ಇದರಿಂದ ಆತಂಕಗೊಂಡ ಪೋಷಕರು ಟಿಟಿಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಶೋಧ ಕಾರ್ಯಾಚರಣೆ ಕೈಗೊಂಡ ಬಳಿಕ ಶನಿವಾರ ಬೆಳಿಗ್ಗೆ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶವ ಪತ್ತೆಯಾಗಿತ್ತು. ಲಕ್ಷಿತಾ ದೇಹದ ಮೇಲಿರುವ ಗಾಯಗಳನ್ನು ಪರಿಶೀಲಿಸಿದ್ದ ಅರಣ್ಯಾಧಿಕಾರಿಗಳು ಚಿರತೆ ದಾಳಿಯಿಂದ ಆಕೆ ಸಾವನ್ನಪ್ಪಿರಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ: 6 ವರ್ಷದ ಮಗು ಸಾವು