ಪಶ್ಚಿಮ ಗೋದಾವರಿ: ಉಕ್ರೇನ್ನಲ್ಲಿ ಯುದ್ಧ ಆರಂಭವಾದಾಗ ತಕ್ಷಣವೇ ಆ ದೇಶ ತೊರೆದು, ಆಂಧ್ರಪ್ರದೇಶದ ವೈದ್ಯರೊಬ್ಬರು ನೆರೆಯ ದೇಶದಲ್ಲಿ ನೆಲೆಸಿದ್ದಾರೆ. ಈ ವೇಳೆ, ಅವರು ತಮ್ಮ ಮುದ್ದಿನ ಜಾಗ್ವಾರ್ ಹಾಗೂ ಪ್ಯಾಂಥರ್ನನ್ನು ಅಲ್ಲೇ ಬಿಟ್ಟು ಹೋಗಿದ್ದು, ಅವನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪಾಟೀಲ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಮೂಲದವರು.
ಆಂಧ್ರಪ್ರದೇಶದ ಡಾ. ಗಿರಿ ಕುಮಾರ್ ಪಾಟೀಲ್ಅವರು ಉಕ್ರೇನ್ನ ಸೆವೆರೊಡೊನೆಟ್ಸ್ಕ್ನಲ್ಲಿರುವ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಯಶಾ ಹೆಸರಿನ ಜಾಗ್ವಾರ್ (ಹೈಬ್ರಿಡ್ ಚಿರತೆ) ಮತ್ತು ಸಬ್ರಿನಾ ಎಂಬ ಪ್ಯಾಂಥರ್ (ಕಪ್ಪು ಚಿರತೆ)ನನ್ನು ಕಳೆದ ಎರಡು ವರ್ಷಗಳಿಂದ ಸಾಕಿದ್ದರು. ಅಳಿವಿನಂಚಿನಲ್ಲಿರುವ ಪ್ರಬೇಧವನ್ನು ಉಳಿಸುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾ ದಾಳಿ ನಡೆಸಿದಾಗ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆ ಧ್ವಂಸ ಮಾಡುವುದರ ಜೊತೆಗೆ, ಆ ಪ್ರದೇಶವನ್ನು ಪುಟಿನ್ ಪಡೆ ಆಕ್ರಮಿಸಿಕೊಂಡಿದೆ. ಹೀಗಾಗಿ ಪಾಟೀಲ್ ಅವರಿಗೆ ಆರ್ಥಿಕ ಸಮಸ್ಯೆ ಉಂಟಾಯಿತು. ಆದ್ದರಿಂದ ಅವರು ಲುಹಾನ್ಸ್ಕ್ನಲ್ಲಿನ ಸ್ಥಳೀಯ ರೈತರೊಂದಿಗೆ ಅವನ್ನು ಬಿಟ್ಟು ಪೋಲೆಂಡ್ಗೆ ಹೋಗಿದ್ದಾರೆ. ಪ್ರಸ್ತುತ ಅವರು ಪೋಲೆಂಡ್ನ ರಾಜಧಾನಿ ವಾರ್ಸಾದಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಪುಟಿನ್ ಭಯೋತ್ಪಾದಕ, ವಿಶ್ವಸಂಸ್ಥೆಯಿಂದ ರಷ್ಯಾ ಹೊರಹಾಕಿ: ಝೆಲೆನ್ಸ್ಕಿ ಆಗ್ರಹ
ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಸಹಾಯ ಮಾಡಲು ಸಾಧ್ಯವಾಗದ ಕಾರಣ, ಭಾರತ ಸರ್ಕಾರಕ್ಕೆ ಸಹಾಯ ಮಾಡುವುದು ಅವರು ಮನವಿ ಮಾಡಿಕೊಂಡಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ಸರ್ಕಾರಗಳು ಸಂಪರ್ಕದಲ್ಲಿವೆ ಎಂದು ವರದಿಯಾಗಿದೆ.
ಅವುಗಳನ್ನು ಸ್ಥಳಾಂತರಿಸಲು ಆಗುವ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸಾಕು ಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ಉಕ್ರೇನ್ನ ಅಕ್ಕಪಕ್ಕದ ದೇಶಗಳು, ಯುರೋಪ್ ಅಥವಾ ಭಾರತ ಅವುಗಳನ್ನು ರಕ್ಷಿಸಲು ಮುಂದಾದರೆ ಪರಿಹಾರ ಕಂಡುಕೊಳ್ಳಲು ಸಿದ್ಧ ಎಂದು ಗಿರಿಕುಮಾರ್ ಪಾಟೀಲ್ ಹೇಳಿದ್ದಾರೆ.