ಶ್ರೀನಗರ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕ ಭಯೋತ್ಪಾದಕ ಸಂಘಟನೆಯ 6 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
'ಲಷ್ಕರ್-ಎ-ಮುಸ್ತಫಾ' ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಅನಂತ್‌ನಾಗ್ ಪೊಲೀಸರು ಬಂಧಿಸಿದ್ದರು. ಬಳಿಕ ಹೆಚ್ಚಿನ ವಿಚಾರಣೆಯ ನಂತರ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇತರ ನಾಲ್ವರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅನಂತ್‌ನಾಗ್ ಮತ್ತು ಬಿಜ್‌ಬೆಹರಾದಲ್ಲಿ ಎಲ್‌ಇಎಂ ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ ಹಿನ್ನೆಲೆ ಹಲವೆಡೆ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿತ್ತು. ಬಿಜ್‌ಬೆಹೇರಾದ ಡೊನಿಪೊರಾದಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಕಾರನ್ನು ತಡೆದಾಗ ಇಬ್ಬರು ಪಲಾಯನ ಮಾಡಲು ಯತ್ನಿಸಿದ್ದಾರೆ. ಆಗ ಕಾರ್ಯಕ್ಷಮತೆ ಮೆರೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಬಂಧಿತರನ್ನು ನಾಥ್‌ಪೋರಾ ಖನಾಬಲ್ ನಿವಾಸಿ ಇಮ್ರಾನ್ ಅಹ್ಮದ್ ಹಜಮ್ ಮತ್ತು ನಂದ್‌ಪೋರಾ ಖನಾಬಲ್ ನಿವಾಸಿ ಇರ್ಫಾನ್ ಅಹ್ಮದ್ ಅಹಂಗರ್ ಎಂದು ಗುರುತಿಸಲಾಗಿದೆ. ಇಬ್ಬರೂ ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗೆ ಸೇರಿದ್ದರು. ಇವರಿಂದ ಎರಡು ಪಿಸ್ತೂಲ್ ಸೇರಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಉಗ್ರರ ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ನೀಡಿದ ಮಾಹಿತಿ ಆಧರಿಸಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಲ್ವರು ಭಯೋತ್ಪಾದಕನ್ನು ವಿವಿಧೆಡೆ ಬಂಧಿಸಲಾಗಿದೆ. ಬಂಧಿತರನ್ನು ಬಿಲಾಲ್ ಅಹ್ಮದ್, ತವ್ಫೀಕ್ ಲಾವೆ, ಮುಜಾಮಿಲ್ ವಾನಿ ಮತ್ತು ಆದಿಲ್ ರಾಥರ್ ಎಂದು ಗುರುತಿಸಲಾಗಿದೆ. ಇವರಿಂದ ಗ್ರೆನೇಡ್, 30 ಎಕೆ-47, ಮತ್ತು 1 ಕೆಜಿ ಸ್ಫೋಟಕ ವಸ್ತು ಒಳಗೊಂಡಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.