ಹೈದರಾಬಾದ್(ತೆಲಂಗಾಣ) : ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ 89ರ ವೃದ್ಧನೋರ್ವ ಬ್ಯಾಂಕ್ ಲಾಕರ್ ಕೊಠಡಿಯಲ್ಲಿ ರಾತ್ರಿಪೂರ್ತಿ ಕಳೆದಿರುವ ಘಟನೆ ಹೈದರಾಬಾದ್ನ ಜುಬಿಲಿ ಹಿಲ್ಸ್ನ ಯೂನಿಯನ್ ಬ್ಯಾಂಕ್ನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿ ಆತನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?: 89 ವರ್ಷದ ಕೃಷ್ಣಾರೆಡ್ಡಿ ಸೋಮವಾರ ಸಂಜೆ ಬ್ಯಾಂಕ್ಗೆ ತೆರಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಯ ಅನುಮತಿ ಪಡೆದು ಲಾಕರ್ ಕೊಠಡಿಯೊಳಗೆ ಹೋಗಿದ್ದಾನೆ. ಆದರೆ, ಆತ ವಾಪಸ್ ಬರುವ ಮುನ್ನ ಬ್ಯಾಂಕ್ ಸಿಬ್ಬಂದಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಹೀಗಾಗಿ, ರಾತ್ರಿಪೂರ್ತಿ ಅದರೊಳಗೆ ಕಳೆಯುವಂತಾಗಿದೆ. ಕೃಷ್ಣಾರೆಡ್ಡಿ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ ನಂತರ, ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ದಶಕಗಳ ಅಸ್ಸೋಂ-ಮೇಘಾಲಯ ಗಡಿ ಸಮಸ್ಯೆ ಇತ್ಯರ್ಥ: ಮಹತ್ವದ ಒಪ್ಪಂದಕ್ಕೆ ಅಮಿತ್ ಶಾ ಸಮ್ಮುಖದಲ್ಲಿ ಸಹಿ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಬ್ಯಾಂಕ್ ಲಾಕರ್ ಕೊಠಡಿ ಒಪನ್ ಮಾಡಿಸಿದ್ದಾರೆ. ಈ ವೇಳೆ ವೃದ್ಧ ಪತ್ತೆಯಾಗಿದ್ದಾನೆ. 89 ವರ್ಷದ ವೃದ್ಧ ಮಧುಮೇಹ, ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದು, ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.