ರಾಜಸ್ಥಾನ: ಜೈಪುರ ಜಿಲ್ಲೆಯ ಸಂಭಾರ್ ಲೇಕ್ ಎಂಬ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದರು. ಯಾವುದೇ ಪ್ರಾಣ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬೆಳಿಗ್ಗೆ 7:27ಕ್ಕೆ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮನೆಗಳಲ್ಲಿದ್ದ ಪಾತ್ರೆ, ಸೀಲಿಂಗ್ ಫ್ಯಾನ್ ಮತ್ತು ವಿದ್ಯುದ್ದೀಪಗಳು ಅಲುಗಾಡಿವೆ. ಇದರ ದೃಶ್ಯ ಲಭ್ಯವಾಗಿದೆ. ಜೈಪುರ ಜಿಲ್ಲೆಯಲ್ಲಿ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.9 ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಸಂಭಾರ್ ಲೇಕ್ ಸುತ್ತಮುತ್ತ ಇದ್ದು, ಭೂಮೇಲ್ಮೈಯಿಂದ ಸುಮಾರು 11 ಕಿಲೋಮೀಟರ್ ಕೆಳಗಿತ್ತು ಎಂದು ಜೈಪುರದ ಹವಾಮಾನ ಕೇಂದ್ರದ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಭೂಕಂಪನ ಏಕೆ ಸಂಭವಿಸುತ್ತದೆ?: "ಭೂಮಿಯೊಳಗೆ 7 ಪದರಗಳಿರುತ್ತವೆ. ಅವುಗಳಿಗೆ ನಿರಂತರ ಚಲನೆ ಇದೆ. ಈ ಪದರಗಳು ಎಲ್ಲಿ ಹೆಚ್ಚು ಪರಸ್ಪರ ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು 'ಫಾಲ್ಟ್ ಲೈನ್' ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ ಪದರಗಳ ಮೂಲೆಗಳು ತಿರುಚಲ್ಪಡುತ್ತವೆ. ಹೆಚ್ಚಿನ ಒತ್ತಡ ನಿರ್ಮಾಣವಾದಾಗ ಪದರಗಳು ಒಡೆಯುತ್ತವೆ. ಆಗ ಒಳಗಿರುವ ಅಪಾರ ಶಕ್ತಿ ಹೊರಬರಲು ಒಂದು ಮಾರ್ಗ ಕಂಡುಕೊಳ್ಳುತ್ತದೆ. ಹೀಗಾದಾಗ ಭೂಮಿ ಕಂಪಿಸುತ್ತದೆ. ಊಲ್ಕಾಪಾತ, ಜ್ವಾಲಾಮುಖಿ ಸ್ಫೋಟ ಮತ್ತು ಪರಮಾಣು ಪರೀಕ್ಷೆಯ ಸಮಯದಲ್ಲೂ ಭೂಕಂಪನದ ಅನುಭವವಾಗುತ್ತದೆ" ಎಂಬುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ: ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 140ಕ್ಕೆ ಏರಿಕೆ