ಹೈದರಾಬಾದ್ : ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ನಡೆಸುತ್ತಿರುವ ಪ್ರಜಾ ಸಂಗ್ರಾಮ ಯಾತ್ರೆ ಮುಕ್ತಾಯ ಹಂತಕ್ಕೆ ತಲುಪಿದೆ. ಇಂದು ಸಂಜೆ ನಡೆಯುವ ಬಹಿರಂಗ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸಲಿದ್ದಾರೆ. ಬಹಿರಂಗ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೊದಲು ಅಮಿತ್ ಶಾ ರಾಮಂತಪುರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಂಜಯ್ ಕುಮಾರ್ ಅವರ ಪಾದಯಾತ್ರೆಯ ಭಾಗವಾಗಿ ಮೇ 5ರಂದು ಮೆಹಬೂಬ್‌ನಗರದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದರು. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್‌ಗೆ ಪರ್ಯಾಯವಾಗಿ ಹೊರಹೊಮ್ಮಲು ಬಿಜೆಪಿ ದೃಢ ಪ್ರಯತ್ನ ನಡೆಸುತ್ತಿರುವುದರಿಂದ ಅಮಿತ್ ಶಾ ಅವರ ಸಾರ್ವಜನಿಕ ಸಭೆ ರಾಜಕೀಯ ಮಹತ್ವ ಪಡೆದಿದೆ.
ಓದಿ: ರಾಜಕಾರಣದಲ್ಲಿ ದಿನಗಣನೆ ಮಾಡಲು ಆಗುವುದಿಲ್ಲ: ಸಿಎಂ ಬೊಮ್ಮಾಯಿ
ಅಮಿತ್ ಶಾ ಪ್ರವಾಸ: ತೆಲಂಗಾಣ ಬಿಜೆಪಿ ರಾಜ್ಯ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಎರಡನೇ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಭಾಗವಹಿಸಲು ಮಧ್ಯಾಹ್ನ 2.30 ಕ್ಕೆ ನಗರದ ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 3 ಗಂಟೆಗೆ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಶಂಷಾಬಾದ್ ಏರ್ಪೋರ್ಟ್ನಲ್ಲಿರುವ ನೋವಾಟೆಲ್ ಹೋಟೆಲಿಗೆ ತೆರಳಲಿದ್ದಾರೆ. 6.30 ಕ್ಕೆ ಹೈದರಾಬಾದ್ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ತುಕ್ಕುಗುಡಾದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಆ ನಂತರ ರಾತ್ರಿ 8 ಗಂಟೆಗೆ ಸಭಾ ಸ್ಥಳದಿಂದ ಏರ್ ಪೋರ್ಟ್ಗೆ ತೆರಳಲಿದ್ದಾರೆ. ರಾತ್ರಿ 8.25ಕ್ಕೆ ದೆಹಲಿಗೆ ವಾಪಸ್ ಪ್ರಯಾಣ ಬೆಳೆಸಲಿದ್ದಾರೆ.
ಆಡಳಿತ ಪಕ್ಷ ಟಿಆರ್‌ಎಸ್, ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ತಮ್ಮನ್ನು ಬಲಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಟಿಆರ್‌ಎಸ್ ಮತ್ತು ಬಿಜೆಪಿ ನಾಯಕರು ಕಳೆದ ಹಲವು ತಿಂಗಳುಗಳಿಂದ ವಿವಿಧ ವಿಷಯಗಳ ಕುರಿತು ತೀವ್ರ ವಾಕ್ಸಮರ, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಆಡಳಿತ ಪಕ್ಷವು ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರನ್ನು ದೊಡ್ಡ ರೀತಿಯಲ್ಲಿ ತಲುಪುತ್ತಿದೆ. 2014 ರಲ್ಲಿ ಪ್ರತ್ಯೇಕ ತೆಲಂಗಾಣ ರಚನೆಯ ನಂತರ ಭಾರಿ ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ತನ್ನ ಅದೃಷ್ಟವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ವಾರಂಗಲ್‌ನಲ್ಲಿ ರೈತರ ಸಮಸ್ಯೆಗಳ ಕುರಿತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿಯ ಸಂಜಯ್ ಕುಮಾರ್ ಅವರು ಏಪ್ರಿಲ್ 14 ರಂದು ಆಲಂಪುರದಿಂದ 'ಪ್ರಜಾ ಸಂಗ್ರಾಮ ಯಾತ್ರೆ' ಎಂಬ ಹೆಸರಿನ ತಮ್ಮ ಪಾದಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಿದರು. ಕಳೆದ ವರ್ಷ ಮೊದಲ ಹಂತದ ‘ಪಾದಯಾತ್ರೆ’ ನಡೆಸಿದ್ದರು.