ನವದೆಹಲಿ: "ಈಶಾನ್ಯದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಬಂಡಾಯದ ಘಟನೆಗಳಲ್ಲಿ ಶೇ.65 ರಷ್ಟು ಇಳಿಕೆಯಾಗಿದೆ. ದೇಶದ ಮೂರು ಹಾಟ್ಸ್ಪಾಟ್ಗಳಾದ ಎಲ್ಡಬ್ಲ್ಯೂಇ (ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳು) ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಶಾಂತಿಯುತವಾಗುತ್ತಿವೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿನ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಭಯೋತ್ಪಾದನೆ ವಿರುದ್ದ ಶೂನ್ಯ ಸಹಿಷ್ಣುತೆ ನೀತಿಯನ್ನು ಉಳಿಸಿಕೊಂಡು ನರೇಂದ್ರ ಮೋದಿ ಸರ್ಕಾರವು ಕಠಿಣ ಕಾನೂನುಗಳನ್ನು ಮಾಡಿದೆ. ಪೊಲೀಸ್ ಪಡೆಯ ಆಧುನೀಕರಣಕ್ಕಾಗಿ 'ಪೊಲೀಸ್ ಟೆಕ್ನಾಲಜಿ ಮಿಷನ್' ಅನ್ನು ಸ್ಥಾಪಿಸುವ ಮೂಲಕ ಸರ್ಕಾರವು ವಿಶ್ವದ ಅತ್ಯುತ್ತಮ ಭಯೋತ್ಪಾದನಾ ನಿಗ್ರಹ ಪಡೆಯನ್ನು ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಿದೆ" ಎಂದು ತಿಳಿಸಿದರು.
"ಮೋದಿ ಸರ್ಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಮಗ್ರ ಕೂಲಂಕಷ ಪರಿಶೀಲನೆಗಾಗಿ ಸಂಸತ್ತಿನಲ್ಲಿ ಮೂರು ಮಸೂದೆಗಳನ್ನು ಮಂಡಿಸಿದೆ. ಮೂರು ಶಾಸನಗಳು 150 ವರ್ಷಗಳ ಹಳೆಯ ಕಾನೂನುಗಳನ್ನು ಬದಲಿಸುತ್ತವೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ಸಂವಿಧಾನಾತ್ಮಕ ಹಕ್ಕುಗಳನ್ನು ಖಾತರಿಪಡಿಸುತ್ತವೆ. ಪ್ರಸ್ತಾವಿತ ಕಾನೂನುಗಳು ಭಾರತೀಯತೆಯನ್ನು ಪ್ರತಿಬಿಂಬಿಸುತ್ತದೆ" ಎಂದರು.
"ಈಶಾನ್ಯದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಬಂಡಾಯ ಘಟನೆಗಳಲ್ಲಿ ಶೇಕಡಾ 65ರಷ್ಟು ಕುಸಿತವಾಗಿದೆ. ಪೊಲೀಸ್ ಸಿಬ್ಬಂದಿಗಳ ಪ್ರಯತ್ನ ಮತ್ತು ಸಾಧನೆಗಳಿಗೆ ಧನ್ಯವಾದ. ಭಯೋತ್ಪಾದಕರ ವಿರುದ್ಧ ಹೋರಾಡುವುದು, ಅಪರಾಧ ತಡೆಯುವುದು, ಜನಸಂದಣಿಯ ಸಮ್ಮುಖದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಥವಾ ವಿಪತ್ತುಗಳ ಸಂದರ್ಭಗಳಲ್ಲಿ ಗುರಾಣಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನರನ್ನು ರಕ್ಷಿಸುವುದು. ಹೀಗೆ ಎಲ್ಲ ಸಂದರ್ಭಗಳಲ್ಲೂ ಪೊಲೀಸ್ ಸಿಬ್ಬಂದಿಗಳು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ" ಎಂದು ಹೇಳಿದರು.
ದುರಂತದಲ್ಲಿ ಪೊಲೀಸ್ ಸಿಬ್ಬಂದಿ ನಿರ್ವಹಿಸಿದ ಪಾತ್ರವನ್ನು ಉಲ್ಲೇಖಿಸಿದ ಅವರು, "ಈ ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮೂಲಕ ವಿವಿಧ ಪೊಲೀಸ್ ಪಡೆಗಳ ಸಿಬ್ಬಂದಿ ವಿಪತ್ತು ನಿರ್ವಹಣೆಯಲ್ಲಿ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ. ಎಷ್ಟೇ ದೊಡ್ಡ ಅನಾಹುತವಾದರೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಅಲ್ಲಿಗೆ ತಲುಪಿದಾಗ ಈಗ NDRF ಬಂದಿರುವುದರಿಂದ ಸಮಸ್ಯೆ ಇಲ್ಲ ಎಂಬ ವಿಶ್ವಾಸ ಜನರಲ್ಲಿ ಮೂಡುತ್ತದೆ" ಎಂದರು.
"ಪೊಲೀಸ್ ಸಿಬ್ಬಂದಿಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡುವ ಮೂಲಕ ಅವರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಹಲವಾರು ಯೋಜನೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರವು ಎಲ್ಲ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ ಮತ್ತು ಅವರ ಸುರಕ್ಷತೆಗಾಗಿ ಕಾಳಜಿ ವಹಿಸುತ್ತದೆ" ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ನಂತರ ದೇಶಕ್ಕೆ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 36,250 ಪೊಲೀಸ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಈ ಪೊಲೀಸ್ ಸ್ಮಾರಕವು ಕೇವಲ ಸಂಕೇತವಾಗಿರದೇ ರಾಷ್ಟ್ರ ನಿರ್ಮಾಣಕ್ಕಾಗಿ ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ಸಮರ್ಪಣೆಗೆ ಮನ್ನಣೆಯಾಗಿದೆ ಎಂದರು.
ಅಕ್ಟೋಬರ್ 21, 1959ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರಿ ಶಸಸಜ್ಜಿತ ಚೀನೀ ಪಡೆಗಳು ಹೊಂಚುದಾಳಿ ನಡೆಸಿದ ಸಂದರ್ಭದಲ್ಲಿ 10 ಪೊಲೀಸರು ಕರ್ತವ್ಯದ ಸಾಲಿನಲ್ಲಿ ಸಾವನ್ನಪ್ಪಿದ್ದರು. ಅಂದಿನಿಂದ, ಪ್ರತಿ ವರ್ಷ ಅಕ್ಟೋಬರ್ 21ರಂದು ಈ ಹುತಾತ್ಮರನ್ನು ಮತ್ತು ಕರ್ತವ್ಯದ ಸಾಲಿನಲ್ಲಿ ಮಡಿದ ಇತರ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಗೌರವವನ್ನು ಸಲ್ಲಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಬಿಜೆಪಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ: ರಾಜಸ್ಥಾನ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ