ನವದೆಹಲಿ: ದೇಶದಲ್ಲಿ ಕೊರೊನಾ ತಲ್ಲಣಗೊಂಡು ಎಲ್ಲಾ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ವೈರಸ್ ಅಟ್ಟಹಾಸ ಶುರುವಾಗಿದೆ. ಲಾಕ್ಡೌನ್ ಭೀತಿಯಲ್ಲಿ ವಲಸೆ ಕಾರ್ಮಿಕರು ಮತ್ತೆ ಗಂಟುಮೂಟೆ ಕಟ್ಟಿಕೊಂಡು ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ವೇಳೆ ವಿವಿಧ ರಾಜ್ಯಗಳ ಒಂದು ಕೋಟಿಗೂ ಅಧಿಕ (1,34,438) ವಲಸಿಗರು ನಗರಗಳನ್ನು ತೊರೆದು ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ್ದರು. ಈ ಪೈಕಿ 32,49,638 ಕಾರ್ಮಿಕರೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿತ್ತು. ಕರ್ನಾಟಕದ 1,34,438 ಮಂದಿ ರಾಜ್ಯಕ್ಕೆ ಹಿಂದಿರುಗಿದ್ದರು. ತಮ್ಮೂರಿಗೆ ಮರಳುವ ವೇಳೆ ರಸ್ತೆ ಅಪಘಾತಕ್ಕೀಡಾಗಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಯುಗಾದಿಗೆ ಸಿಹಿ ಸುದ್ದಿ.. 'ಸ್ಪುಟ್ನಿಕ್ ವಿ' ಲಸಿಕೆ ಬಳಕೆಗೆ ಡಿಸಿಜಿಐನಿಂದಲೂ ಸಿಕ್ತು ಅನುಮೋದನೆ
ಅನ್ಲಾಕ್ ಆಗಿ, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಾ ಬರುತ್ತಿದ್ದಂತೆಯೇ ಮತ್ತೆ ಹೊಟ್ಟೆಪಾಡಿಗೆ ಕೆಲಸ ಅರಸಿ ನಗರಗಳ ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಇದೀಗ ಮತ್ತೆ ಕೊರೊನಾ ಅಬ್ಬರಿಸುತ್ತಿದ್ದು, ಕಳೆದ ವರ್ಷದಂತೆ ದುಸ್ಥಿತಿ ಬರುವ ಮುನ್ನವೇ ಕಾರ್ಮಿಕರು ಊರುಗಳಿಗೆ ಹೊರಟಿದ್ದಾರೆ. ಮುಂಬೈ, ದೆಹಲಿ ಬಸ್, ರೈಲ್ವೈ ನಿಲ್ದಾಣಗಳಲ್ಲಿ ಇದೀಗ ವಲಸಿಗರೇ ತುಂಬಿ ತುಳುಕುತ್ತಿದ್ದಾರೆ.
"ಕೋವಿಡ್ ಕೇಸ್ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ ಲಾಕ್ಡೌನ್ ಹೇರುವುದು ಪಕ್ಕಾ ಎನಿಸುತ್ತಿದೆ. ಹೀಗಾಗಿ ನಾವು ನಮ್ಮ ಮನೆಗಳಿಗೆ ಹೋಗುತ್ತಿದ್ದೇವೆ" ಎಂದು ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರೊಬ್ಬರು ಹೇಳಿದ್ದಾರೆ.