ಸಿರೋಹಿ(ರಾಜಸ್ಥಾನ) : ಹುಟ್ಟುತ್ತಾ ಅಣ್ಣ ತಮ್ಮಂದಿರು.. ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ರಕ್ತ ಸಂಬಂಧದಲ್ಲೇ ಕಲಹಗಳಿಂದಾಗಿ ಕುಟುಂಬಗಳು ನಶಿಸಿ, ಕೊಲೆಗಳೇ ನಡೆದಿವೆ. ಆದರೆ ಕೆಲವೊಂದು ರಕ್ತ ಸಂಬಂಧಗಳು ಅತ್ಯಪರೂಪವಾಗಿರುತ್ತವೆ. ಬೆಲೆ ಕಟ್ಟಲಾಗದ ಆದರ್ಶವನ್ನು ನಮಗಾಗಿ ಬಿಟ್ಟು ಹೋಗುತ್ತವೆ.
ಇತ್ತೀಚೆಗೆ 'ಸಹೋದರರ ಸಾವು' ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಹೌದು.. ರಾಜಸ್ಥಾನದ ಸಿರೋಹಿಯಲ್ಲಿ ಸಹೋದರರು ಒಂದೇ ದಿನ ಸಾವನ್ನಪ್ಪಿದ್ದಾರೆ. ಇದರಲ್ಲೇನೂ ವಿಶೇಷವಿಲ್ಲ ಎಂದು ಹೇಳುವವರು, ಆ ಸಹೋದರರ ನಡುವಿನ ಬಾಂಧವ್ಯದ ಬಗ್ಗೆ ತಿಳಿಕೊಂಡ್ರೆ ಅಚ್ಚರಿ ಪಡದೇ ಇರೋದಕ್ಕೆ ಸಾಧ್ಯವಿಲ್ಲ.
ಕೇವಲ 20 ನಿಮಿಷದ ಅಂತರ : ರಾವತ್ರಾಮ್ ಮತ್ತು ಹಿರಾರಾಮ್ ಒಟ್ಟಿಗೆ ಜೀವನ ಮಾಡುತ್ತಿದ್ದರು. ಇವರಿಬ್ಬರ ನಡುವೆ ಸುಮಾರು 15 ವರ್ಷ ವಯಸ್ಸಿನ ಅಂತರವಿದ್ದು, ಹುಟ್ಟಿದಾಗಿನಿಂದ ಜೊತೆಯಲ್ಲೇ ಬದುಕುತ್ತಿದ್ದರು. ಹಿರಿಯನಾದ ರಾವತ್ರಾಮ್ಗೆ 90 ವರ್ಷ ವಯಸ್ಸು, ಕಿರಿಯನಾದ ಹಿರಾರಾಮ್ಗೆ 75 ವರ್ಷ ವಯಸ್ಸು. ಇವರದ್ದು 11 ಮಂದಿ ಸಹೋದರ ಮತ್ತು ಸಹೋದರಿಯರ ತುಂಬು ಕುಟುಂಬ.
ಇದನ್ನೂ ಓದಿ: ದೆಹಲಿಯ ಸೋಪಾನ್ ಬಂಗಲೆಯನ್ನೇ ಮಾರಿದ ಅಮಿತಾಭ್ ಬಚ್ಚನ್: ಕಾರಣ?
ಹುಟ್ಟಿದಾಗಿನಿಂದ ಜೊತೆಯಲ್ಲಿಯೇ ಬೆಳೆದ ಇಬ್ಬರಲ್ಲೂ, ಅವರ ಜೀವನದುದ್ದಕ್ಕೂ ಪರಸ್ಪರ ತುಂಬಾ ಪ್ರೀತಿ ಇತ್ತು. ಅಣ್ಣತಮ್ಮಂದಿರ ಸ್ನೇಹಕ್ಕೆ ಆ ಪ್ರದೇಶದಲ್ಲಿ ಅವರಿಬ್ಬರನ್ನು ಉದಾಹರಣೆಯಾಗಿ ನೀಡುತ್ತಾರೆ. ಒಂದೇ ದಿನ ಮದುವೆಯಾಗಿದ್ದು, ಕೂಡಾ ಕಾಕತಾಳೀಯ. ಇಬ್ಬರೂ ಕೇವಲ 20 ನಿಮಿಷದ ಅಂತರದಲ್ಲಿ ಮೃತಪಟ್ಟಿದ್ದಾರೆ. ಅವರಿಬ್ಬರನ್ನೂ ಅಕ್ಕಪಕ್ಕದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ದಿನವೂ ಒಬ್ಬರನ್ನೊಬ್ಬರು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ನನ್ನ ತಂದೆ ರಾವತ್ರಾಮ್ ಮತ್ತು ಚಿಕ್ಕಪ್ಪ ಹಿರಾರಾಮ್ ನಡುವೆ ಅನ್ಯೋನ್ಯವಾದ ಸಂಬಂಧವಿತ್ತು. ಇಬ್ಬರೂ ಜೊತೆಯಾಗಿಯೇ ತಮ್ಮ ಜೀವನವನ್ನು ಪೂರ್ಣಗೊಳಿಸಿದ್ದಾರೆ ಎಂದು ರಾವತ್ರಾಮ್ ಪುತ್ರ ಭಿಕಾರಾಮ್ ಹೇಳಿದ್ರು.