ನವೆದಹಲಿ : ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಂಡೀಗಢದಲ್ಲಿಂದು ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನವೇ ಅವರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ಈಗ ಪಂಜಾಬ್‌ನ ಮುಂದಿನ ಸಿಎಂ ಯಾರು ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಹಲವು ಆಶಾವಾದಿಗಳಿದ್ದರೂ ಪ್ರಮುಖವಾಗಿ ಮೂವರ ಹೆಸರುಗಳು ಕೇಳಿ ಬರುತ್ತಿವೆ. ಪಿಸಿಸಿ ಮಾಜಿ ಅಧ್ಯಕ್ಷ ಸುನಿಲ್ ಜಖರ್, ಸಚಿವ ಸುಖಿಂದರ್ ರಾಂಧವ ಮತ್ತು ಮಾಜಿ ಮುಖ್ಯಮಂತ್ರಿ ರಾಜೇಂದರ್ ಕೌರ್ ಭಟ್ಟಲ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಮೂವರಲ್ಲಿ ಒಬ್ಬರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡುವ ಸಾಧ್ಯತೆ ಇದೆ.
ಅಂತಿಮ ನಿರ್ಧಾರ ಸೋನಿಯಾ ಗಾಂಧಿಗೆ
ಮತ್ತೊಂದೆಡೆ ಚಂಡೀಗಢದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಮುಂದಿನ ಮುಖ್ಯಮಂತ್ರಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ನಿರ್ಧಾರವನ್ನು ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ವೀಕ್ಷಕರಾಗಿದ್ದ ಅಜಯ್ ಮಾಕೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮರೀಂದರ್ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ. ಜೊತೆಗೆ ಸಿಂಗ್ ಅವರು ಪಕ್ಷಕ್ಕೆ ಮಾರ್ಗದರ್ಶಕರಾಗಿ ಮುಂದುವರಿಯುತ್ತಾರೆ ಎಂದು ಮಾಕೇನ್ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ 80 ಶಾಸಕರ ಪೈಕಿ 78 ಮಂದಿ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದ್ದಾರೆ.
ಅತೃಪ್ತಿಯೊಂದಿಗೆ ರಾಜೀನಾಮೆ!
ದೆಹಲಿಯ ಕೈ ನಾಯಕರು ನಡೆಸಿಕೊಳ್ಳುತ್ತಿದ್ದ ರೀತಿಗೆ ಬೇಸತ್ತು ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಬಳಿಕ ಪಂಜಾಬ್ ಕಾಂಗ್ರೆಸ್ ನಾಯಕರಾದ ನವಜೋತ್ ಸಿಂಗ್ ಸಿಧು ಸೇರಿದಂತೆ ಹಲವು ನಾಯಕರ ವಿರುದ್ಧ ಅಮರೀಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಮುಂದಿನ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್