ಮೊಹಾಲಿ(ಪಂಜಾಬ್): ಜಪಾನ್ನ ಟೋಕಿಯೋ ಒಲಿಂಪಿಕ್ನಲ್ಲಿ ಭಾರತವನ್ನ ಪ್ರತಿನಿಧಿಸಿ ಇತಿಹಾಸ ಸೃಷ್ಟಿಸಿದ ಕ್ರೀಡಾಳುಗಳಿಗೆ ದೇಶದಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕ್ರೀಡಾಪಟುಗಳಿಗೂ ಕರೆ ಮಾಡಿ ಅಭಿನಂದಿಸಿದ್ದರು. ಅಷ್ಟೇ ಅಲ್ಲ, ಒಲಿಂಪಿಕ್ಸ್ನಲ್ಲಿ ಪದಕ ಪಡೆದವರನ್ನ ಬೆಳಗಿನ ಉಪಾಹಾರಕ್ಕೆ ಆಹ್ವಾನಿಸಿ ಸತ್ಕರಿಸಿದ್ದರು. ಇದೀಗ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕ್ರೀಡಾಪಟುಗಳಿಗೆ ರಾಜೌತಣ ನೀಡಿ ಗೌರವಿಸಿದ್ದಾರೆ.
ಟೋಕಿಯೋದಿಂದ ತಮ್ಮ ಪದಕದ ಜೊತೆ ಮರಳಿರುವ ಕ್ರೀಡಾಪಟುಗಳಿಗೆ ಮೊಹಾಲಿಯಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಅದ್ದೂರಿ ಭೋಜನಕೂಟ ಏರ್ಪಡಿಸಿದ್ದರು. ವಿಶೇಷ ಅಂದ್ರೆ ಈ ಭೋಜನ ಕೂಟದಲ್ಲಿ ಮಾಂಸಾಹಾರಿ ಅಡುಗೆ ಹೆಚ್ಚು ಗಮನ ಸೆಳೆದಿತ್ತು.
ಮಟನ್ ಖಾರಾ ಪಿಶೂರಿ, ಚಿಕನ್ ಖಾದ್ಯ, ಆಲೂ ಕುರ್ಮ ಮತ್ತು ದಾಲ್ ಮರ್ಸಿ ಖಾದ್ಯ ಕ್ರೀಡಾಪಟುಗಳಿಗಾಗಿ ಸಿದ್ದಗೊಂಡಿತ್ತು. ವಿಶೇಷ ಅಂದರೆ ಖದ್ದು ಸಿಎಂ ಅಮರಿಂದರ್ ಸಿಂಗ್ ಖಾದ್ಯ ತಯಾರಿಕೆಯಲ್ಲಿ ಕಾಣಿಸಿಕೊಂಡು ಮಾದರಿಯಾಗಿದ್ದಾರೆ ಕೂಡಾ.
ಅವರೆಲ್ಲ ಸಾಕಷ್ಟು ಶ್ರಮಪಟ್ಟಿದ್ದಾರೆ. ಗೆಲುವಿಗಾಗಿ ಶ್ರಮಿಸಿದ್ದಾರೆ. ಇದಕ್ಕೆ ಹೋಲಿಸಿದರೆ ಅವರಿಗೆ ಏನು ಮಾಡಿದರೂ ಕಡಿಮೆಯೆ ಅಂತ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟರು. ಇತ್ತ ಕ್ರೀಡಾಪಟುಗಳಿಗೆ ಸ್ವತಃ ಅಡುಗೆ ಬಡಿಸಲು ಅಮರಿಂದರ್ ಸಿಂಗ್ ನೆರವಾದರು. ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಭೋಜನಕೂಟದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಮಹಿಳಾ, ಮತ್ತು ಪುರುಷರ ಹಾಕಿ ತಂಡದ ಕ್ರೀಡಾಪಟುಗಳು, ರೇಸ್ ವಾಕರ್ ಗುರ್ಪ್ರೀತ್ ಸಿಂಗ್, ಶೂಟರ್ ಅಂಗದ್ವೀರ್ ಸಿಂಗ್ ಬಾಜ್ವಾ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಿಎಂ ರಾಜಾತಿಥ್ಯಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ಧನ್ಯವಾದ ಸಮರ್ಪಿಸಿದ್ದಾರೆ. ಸಿಎಂ ನೀಡಿದ ಗೌರವಕ್ಕೆ ಅಭಾರಿ ಎಂದಿದ್ದಾರೆ.
ಇದನ್ನೂ ಓದಿ: ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳಲು 2ನೇ ಮಹಡಿಯಿಂದ ಹಾರಿದ್ದ ಬಿಜೆಪಿ ಮುಖಂಡನ ಪತ್ನಿ ಸಾವು