ಚಂಡೀಗಢ( ಪಂಜಾಬ್): ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ಬಂಡಾಯದ ಕಹಳೆ ಮೊಳಗಿದೆ. ನಿನ್ನೆ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ತಮ್ಮದೇ ಪಕ್ಷದ ನಾಯಕ ನವಜೋತ್ ಸಿಂಗ್ ವಿರುದ್ಧ ಹರಿಹಾಯ್ದಿದ್ದಾರೆ. ಪಟಿಯಾಲ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವ ಉದ್ದೇಶದಿಂದ ನವಜೋತ್ ಸಿಂಗ್ ಸಿದ್ದು, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಗರಂ ಆಗಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅಮರಿಂದರ್ ಸಿಂಗ್ ತಮ್ಮ ಮಾಜಿ ಸಂಪುಟ ಸಹೋದ್ಯೋಗಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅವರು ಎಲ್ಲಿಗೆ ಹೋಗಬೇಕೆಂದು ಬಯಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಅವರು ನಮ್ಮ ಪಕ್ಷದಲ್ಲೇ ಇದ್ದುಕೊಂಡು ನನ್ನ ವಿರುದ್ಧ ಹೋರಾಡುತ್ತಿದ್ದಾರೆ. ಒಂದೊಮ್ಮೆ ಅವರು ನನ್ನ ವಿರುದ್ಧ ಸ್ಪರ್ಧಿಸುವುದಿದ್ದರೆ ಸ್ಪರ್ಧಿಸಲಿ, ಈ ಹಿಂದೆ ಜೆ ಜೆ ಸಿಂಗ್ ತಮ್ಮ ವಿರುದ್ಧ ಸ್ಪರ್ಧಿಸಿ ಏನಾದರೂ ಎಂಬುದು ಎಲ್ಲರಿಗೋ ಗೊತ್ತೇ ಇದೆ.
ಠೇವಣಿ ಕಳೆದುಕೊಂಡಿರುವುದು ಗೊತ್ತಲ ಎನ್ನುವ ಮೂಲಕ ನವಜೋತ್ ಸಿಂಗ್ ಸಿಧುಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇರ ಸವಾಲು ಕೂಡಾ ಹಾಕಿದರು. ಇತ್ತೀಚಿಗಷ್ಟೇ ಸಿಧು ತಮ್ಮ ಮೇಲಿದ್ದ ಕೊಟಕ್ಪುರ ಫೈರಿಂಗ್ ಕೇಸ್ನಿಂದ ಕ್ಲೀನ್ಚಿಟ್ ಪಡೆದ ಮೇಲೆ ಟ್ವೀಟ್ ಮೂಲಕ ನೇರವಾಗಿ ಸಿಎಂ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ಈ ವಾಗ್ದಾಳಿ ವಿರುದ್ಧ ಸಿಎಂ ನೇರ ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ಸಿಎಂ ತಿರುಗೇಟಿನ ಬಳಿಕ ಸಿಧು ಟ್ವೀಟ್ ಮಾಡಿ ಮರು ತಿರುಗೇಟು ಸಹ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಧು, "ಪಂಜಾಬ್ನ ಆತ್ಮಸಾಕ್ಷಿಯನ್ನು ಹಳಿ ತಪ್ಪಿಸುವ ಪ್ರಯತ್ನಗಳು ವಿಫಲವಾಗುತ್ತವೆ ... ನನ್ನ ಆತ್ಮ ಪಂಜಾಬ್ ಮತ್ತು ಪಂಜಾಬ್ನ ಆತ್ಮ ಗುರು ಗ್ರಂಥ ಸಾಹೀಬ್. ನಮ್ಮ ಹೋರಾಟ ನ್ಯಾಯಕ್ಕಾಗಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆ ಸ್ಥಾನದ ಸ್ಪರ್ಧೆ ಚರ್ಚೆ ಅಪ್ರಸ್ತುತ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ ಜೋರಾಗಿ ಸಾಗುತ್ತಿದೆ.
ಈ ನಡುವೆ ಸೋಮವಾರ ನಡೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುನಿಲ್ ಜಖರ್ ಮತ್ತು ಸಹಕಾರ ಮತ್ತು ಜೈಲು ಸಚಿವ ಸುಖ್ಜಿಂದರ್ ಸಿಂಗ್ ರಾಂಧವಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಈ ಇಬ್ಬರ ರಾಜೀನಾಮೆಯನ್ನ ಅಂಗೀಕರಿಸಲಾಗಿಲ್ಲ. ಮತ್ತೊಂದೆಡೆ ಸಿಎಂ ಅಮರಿಂದರ್ ಸಿಂಗ್ 30 ಶಾಸಕರೊಂದಿಗೆ ಚರ್ಚೆ ನಡೆಸಿ ಭಿನ್ನಮತ ಶಮನಕ್ಕೆ ಪ್ರಯತ್ನ ಮಾಡಿದ್ದರು.