ತಿರುವನಂತಪುರಂ (ಕೇರಳ): ಕೇರಳದಲ್ಲಿ ಅಲ್ಪಶಿ ಆರಟ್ಟು ಹಬ್ಬದ ಮೆರವಣಿಗೆಯು ಮಂಗಳವಾರ ರಾತ್ರಿ ಸಂಪನ್ನಗೊಂಡಿದೆ. ಈ ಮೆರವಣಿಗೆಯು ರನ್ ವೇ ಮೂಲಕ ಸಾಗುವ ಉದ್ದೇಶದಿಂದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಐದು ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಲಾಗಿತ್ತು ಮತ್ತು 10 ವಿಮಾನಗಳ ಹಾರಾಟದ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು.
ಹೌದು, ಅಲ್ಪಶಿ ಆರಟ್ಟು ಹಬ್ಬದ ನಿಮಿತ್ತ ಪದ್ಮನಾಭ ಸ್ವಾಮಿ ದೇವಸ್ಥಾನದಿಂದ ಪದ್ಮನಾಭ ಸ್ವಾಮಿ ಮತ್ತು ನರಸಿಂಹ ಮೂರ್ತಿಗಳನ್ನು ಹೊತ್ತ ಮೆರವಣಿಗೆ ವಿಜೃಂಭಣೆಯಿಂದ ಜರುಗಿತ್ತು. ಈ ಮೆರವಣಿಗೆಯು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಶಾಂಗುಮುಖಂ ಬೀಚ್‌ವರೆಗೆ ಸಾಗಿ ಸಂಪನ್ನಗೊಂಡಿತು.
ಧಾರ್ಮಿಕ ಮೆರವಣಿಗೆಗಾಗಿ ಬಂದ್ ಆಗುವ ವಿಶ್ವದ ಏಕೈಕ ವಿಮಾನ ನಿಲ್ದಾಣ: ದೇವರ ಮೂರ್ತಿಗಳು ಮೆರವಣಿಗೆಯು ರನ್‌ವೇ ಮೂಲಕವೇ ಸಾಗಿದ್ದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಈ ತಿರುವನಂತಪುರಂ ವಿಮಾನ ನಿಲ್ದಾಣವು ಈಗ ಗೌತಮ್ ಅಂಬಾನಿ ಒಡೆತನದಲ್ಲಿ ನಿರ್ವಹಿಸಲಾಗುತ್ತಿದ್ದು, ಧಾರ್ಮಿಕ ಮೆರವಣಿಗೆಗಾಗಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವ ಇಡೀ ವಿಶ್ವದ ಏಕೈಕ ವಿಮಾನ ನಿಲ್ದಾಣವಾಗಿದೆ.
ಶತಮಾನಗಳ ಹಳೆಯ ಆಚರಣೆಯು ಯಾವುದೇ ಅಡೆತಡೆಯಿಲ್ಲದೇ ಮುಂದುವರಿಸಲು ವಿಮಾನ ನಿಲ್ದಾಣವು ಪ್ರತಿ ವರ್ಷ ಎರಡು ಬಾರಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತದೆ. ದೇವರ ಪಲ್ಲಕ್ಕಿ, ಆನೆ ಮತ್ತು ಆರೋಹಿತ ಸೈನ್ಯ ಹಾಗೂ ಮಂಗಳ ವಾದ್ಯದವರು ಸೇರಿ ಅನೇಕರ ಜನರೊಂದಿಗೆ ಮೆರವಣಿಗೆಯು ರನ್‌ವೇ ಮೂಲಕವೇ ಹಾದು ಹೋಗುತ್ತದೆ.
1932ರಿಂದಲೂ ರಾಜಮನೆತನದಿಂದ ನಡೆಯತ್ತಿದೆ ಮೆರವಣಿಗೆ: ಅಲ್ಲದೇ, ಸುತ್ತ - ಮುತ್ತಲಿನ ದೇವಸ್ಥಾನಗಳ ವಿಗ್ರಹಗಳೂ ಸಹ ಮೆರವಣಿಗೆಯಲ್ಲಿ ಸೇರಿಕೊಳ್ಳುತ್ತವೆ. ಪುಣ್ಯ ಸ್ನಾನಕ್ಕಾಗಿ ಶಾಂಗುಮುಖಂ ಸಮುದ್ರ ತೀರಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಅದೇ ಮಾರ್ಗದ ಮೂಲಕ ದೇವಾಲಯಗಳಿಗೆ ಹಿಂತಿರುಗಿಸಲಾಗುತ್ತದೆ. ತಿರುವನಂತಪುರಂ ರಾಜಮನೆತನದವರು ಈ ಮರೆವಣಿಗೆಯನ್ನು ವಿಮಾನ ನಿಲ್ದಾಣ ಆರಂಭವಾಗುವ ಮುಂಚಿನಿಂದಲೂ ಎಂದರೆ 1932ರಿಂದಲೂ ನಡೆಸಿಕೊಂಡು ಬರುತ್ತಿದ್ದು, ಈಗ ವಿಮಾನ ನಿಲ್ದಾಣದ ಆರಂಭವಾದ ನಂತರವೂ ಅದೇ ಮಾರ್ಗದಲ್ಲಿ ಸಾಗುತ್ತಿದೆ.
ವಿಮಾನ ನಿಲ್ದಾಣವು ಕಾರ್ಯಾಚರಣೆ ಪ್ರಾರಂಭಿಸುವಾಗಲೇ ತಿರುವನಂತಪುರಂ ರಾಜಮನೆತನದ ಕೋರಿಕೆಯ ಮೇರೆಗೆ ಮೆರವಣಿಗೆಯನ್ನು ಮುಂದುವರಿಸಲು ಅಧಿಕಾರಿಗಳು ಅನುಮತಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ರನ್‌ವೇ ಮೂಲಕ ಸಾಗುವ ಮೆರವಣಿಗೆಯ ವೀಡಿಯೊಗ್ರಫಿಯನ್ನು ನಿಷೇಧಿಸಲಾಗಿತ್ತು.
ಇದನ್ನೂ ಓದಿ: ನವೆಂಬರ್ 3 ರಿಂದ ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಹಾರಾಟ