ವಿರಾರ್(ಮಹಾರಾಷ್ಟ್ರ): ಕರ್ನಾಟಕದಲ್ಲಿ ಶುರುವಾದ ಉದ್ಭವವಾದ ಹಿಜಾಬ್ ವಿವಾದ ದೇಶದ ಬಹುತೇಕ ರಾಜ್ಯಗಳಲ್ಲೂ ಹಬ್ಬಿದೆ. ಇದೀಗ ಮಹಾರಾಷ್ಟ್ರದಲ್ಲಿ ಶಾಲಾ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಸ್ಲಿಂ ಮಹಿಳೆಗೆ ಹಿಜಾಬ್ ಹಾಕಿಕೊಂಡು ಬಂದಿದ್ದಕ್ಕಾಗಿ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.
2019ರ ಜುಲೈನಲ್ಲಿ ವಿರಾರ್ನಲ್ಲಿರುವ ವಿವಾ ಕಾನೂನು ಕಾಲೇಜ್ ಪ್ರಾಂಶುಪಾಲೆಯಾಗಿ ಬತ್ತುಲ್ ಹಮೀದ್ ನೇಮಕಗೊಂಡಿದ್ದರು. ಕಳೆದ ಕೆಲ ದಿನಗಳಿಂದ ಅವರು ಕಾಲೇಜ್ನಲ್ಲಿ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದು, ಕಾಲೇಜ್ಗೆ ಬಂದಾಗ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊಠಡಿಯೊಳಗೆ ಹೋಗಲು ಬಿಡದೇ ಇರುವುದು, ಇತರೆ ಸಿಬ್ಬಂದಿ ಸರಿಯಾಗಿ ಸಹಕಾರ ನೀಡದಿರುವುದು ಸೇರಿದಂತೆ ಅನೇಕ ರೀತಿಯ ತೊಂದರೆ ಅನುಭವಿಸಿದ್ದಾರೆ. ಇದರಿಂದ ಮನನೊಂದಿರುವ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.
ಈ ಸಂಬಂಧ ಕಾಲೇಜ್ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ 'ಆರಂಭದ ದಿನಗಳಲ್ಲಿ ಆಡಳಿತ ಮಂಡಳಿ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ನನ್ನೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಕಾಲೇಜ್ನಲ್ಲಿನ ವಾತಾವರಣ ಸರಿಯಾಗಿಲ್ಲ. ಇದರಿಂದ ನನಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತಿದ್ದು, ಇದೇ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದಾರೆ. ಆದ್ರೆ ರಾಜೀನಾಮೆ ಪತ್ರದಲ್ಲಿ ಹಿಜಾಬ್ ವಿಚಾರದ ಬಗ್ಗೆ ಯಾವುದೇ ರೀತಿಯ ಉಲ್ಲೇಖ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: 7 ತಿಂಗಳಲ್ಲಿ 3 ಬಾರಿ ಕಚ್ಚಿದ ನಾಗರಹಾವು.. ಸಾವು - ಬದುಕಿನ ಹೋರಾಟದಲ್ಲಿ ಬದುಕುಳಿಯಲಿಲ್ಲ ಪ್ರಣಾಳಿ!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಲೇಜ್ ಆಡಳಿತ ಮಂಡಳಿ, ಹಿಜಾಬ್ ಹಾಕಿಕೊಂಡು ಬರುವುದರಿಂದ ನಾವು ಅವರಿಗೆ ಕಿರುಕುಳ ನೀಡುವುದಾಗಿದ್ದರೆ, ಅವರನ್ನ ನಾವು ನೇಮಕ ಮಾಡಿಕೊಳ್ಳುತ್ತಿರಲಿಲ್ಲ. ನಮ್ಮ ಕಾಲೇಜ್ನಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರತಿದಿನ ಹಿಜಾಬ್ ಹಾಕಿಕೊಂಡು ಬರುತ್ತಾರೆ ಎಂದು ಸ್ಪಷ್ಟಪಡಿಸಿದೆ.