ಆಗ್ರಾ (ಉತ್ತರ ಪ್ರದೇಶ): ಟೆಂಪೋ ಚಾಲಕನೋರ್ವ ಉತ್ತರ ಪ್ರದೇಶದ ಗೃಹರಕ್ಷಕ ದಳ ಮತ್ತು ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರ ಪುತ್ರ ಚಂದ್ರಮೋಹನ್ ಪ್ರಜಾಪತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಚಿವರ ಪುತ್ರ ಆಗ್ರಾದ ಟ್ರಾನ್ಸ್ ಯಮುನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಚಿವ ಧರಂವೀರ್ ಅವರ ಪುತ್ರ ಚಂದ್ರಮೋಹನ್ ಅವರು ತಮ್ಮ ತಾಯಿ ರಾಜಕುಮಾರಿ ಅವರೊಂದಿಗೆ ಮಂಗಳವಾರ ಗಂಗಾ ದಸರಾದಂದು ಕಾರಿನಲ್ಲಿ ತಮ್ಮ ಗ್ರಾಮವಾದ ಹಾಜಿಪುರ ಖೇಡಾ ಖಂಡೌಲಿಗೆ ಬಂದಿದ್ದರು. ಇಲ್ಲಿಂದ ಆಗ್ರಾದ ಆವಾಸ್ ವಿಕಾಸ್ ಕಾಲೋನಿಯಲ್ಲಿರುವ ಮನೆಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಸಚಿವರ ಪುತ್ರನ ಕಾರಿಗೆ ಟೆಂಪೋ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಈ ಅಪಘಾತದಲ್ಲಿ ಚಂದ್ರಮೋಹನ್ ಮತ್ತು ತಾಯಿ ರಾಜಕುಮಾರಿ ಪ್ರಜಾಪತಿ ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಅಲ್ಲದೇ, ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ನಂತರ ಆರೋಪಿ ಚಾಲಕ ಟೆಂಪೋದೊಂದಿಗೆ ಓಡಿಹೋಗಲು ಯತ್ನಿಸಿದ್ದಾನೆ. ಇದಾದ ಬಳಿಕ ಚಂದ್ರಮೋಹನ ಟೆಂಪೋವನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಟೆಂಪೋ ಹಿಂಬಾಲಿಸಿದ ನಂತರ ಚಾಲಕನ ಇಬ್ಬರು ಸ್ನೇಹಿತರು ಕೂಡ ಸ್ಥಳಕ್ಕೆ ಬಂದರು ಎಂದು ಸಚಿವರ ಪುತ್ರ ತಿಳಿಸಿದ್ದಾರೆ.
ಇಬ್ಬರು ಯುವಕರ ಕೈಯಲ್ಲಿ ಬಡಿಗೆಗಳು ಇದ್ದವು. ಇದಾದ ಬಳಿಕ ಟೆಂಪೋ ಚಾಲಕ ಸೇರಿದಂತೆ ಮೂವರೂ ಸುತ್ತಿಗೆಯಿಂದ ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು ಎಂದೂ ಚಂದ್ರಮೋಹನ್ ಪ್ರಜಾಪತಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಗಲಾಟೆ ನಡುವೆಯೇ ಸ್ಥಳದಲ್ಲಿ ಅಪಾರ ಜನ ಜಮಾಯಿಸಿದ್ದರು. ಆಗ ಸಿಕ್ಕ ಸಮಯವನ್ನೇ ಸಾಧಿಸಿ ಟೆಂಪೋ ಚಾಲಕ ಆರೋಪಿಗಳ ಸಮೇತ ಪರಾರಿಯಾಗಿದ್ದಾನೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಚಂದ್ರಮೋಹನ್ ಪ್ರಜಾಪತಿ ನೀಡಿದ ದೂರಿನ ಮೇರೆಗೆ ಟೆಂಪೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಟ್ರಾನ್ಸ್ ಯಮುನಾ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಆನಂದ್ ಪ್ರಕಾಶ್ ತಿಳಿಸಿದ್ದಾರೆ. ಚಾಲಕನ ವಿರುದ್ಧ ಐಪಿಸಿ ಕಲಂ 279, 427, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಪೈಲಟ್ ಕಾರಿಗೆ ಬಸ್ ಡಿಕ್ಕಿ: ಮತ್ತೊಂದೆಡೆ, ಹರಿಯಾಣ ಸಚಿವ ಬನ್ವಾರಿ ಲಾಲ್ ಅವರ ಬೆಂಗಾವಲು ಪಡೆಯ ಪೈಲಟ್ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಜಿಂದ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಕಿಲಾ ಜಫರ್‌ಗಢ ಮತ್ತು ಬುಧಾ ಖೇರಾ ಗ್ರಾಮಗಳ ನಡುವೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಸಚಿವ ಬನ್ವಾರಿ ಲಾಲ್ ಅವರ ಬೆಂಗಾವಲು ಪಡೆ 152ಡಿ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಡಿಕ್ಕಿ ಸಂಭವಿಸಿದೆ. ಪೈಲಟ್ ಕಾರಿಗೆ ಬಸ್ ಡಿಕ್ಕಿ ಹೊಡೆದು ಅದರ ವಿಂಡ್ ಶೀಲ್ಡ್ ಛಿದ್ರಗೊಂಡಿದೆ. ರಾಜಸ್ಥಾನದಿಂದ ಖಾಸಗಿ ಬಸ್ ಬರುತ್ತಿತ್ತು. ಸದ್ಯ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಚಾಲಕ ಸಾವು: ಪೆಟ್ರೋಲ್ ಬಂಕ್ಗೆ ನುಗ್ಗಿದ ಬಸ್, ಸಮಯ ಪ್ರಜ್ಞೆ ಮೆರೆದ ನಿರ್ವಾಹಕ