ಅಲಹಾಬಾದ್: ಉತ್ತರ ಪ್ರದೇಶದ ಪ್ರಯಾಗ್ರಾಜ್‌ನ ಗಂಗಾ ನದಿ ತೀರದಲ್ಲಿ ಸರಿಯಾಗಿ ದಹಿಸದೆ ಬಿದ್ದಿರುವ ಮೃತದೇಹಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಕೋವಿಡ್ 2ನೇ ಅಲೆ ವೇಳೆ ಸೋಂಕಿನಿಂದ ಮೃತಪಟ್ಟ ಹಲವಾರು ಶವಗಳನ್ನು ಪ್ರಯಾಗ್ರಾಜ್‌ನ ಗಂಗಾ ನದಿ ದಡದಲ್ಲಿ ಸರಿಯಾದ ರೀತಿಯಲ್ಲಿ, ಸಂಪೂರ್ಣವಾಗಿ ಅಂತ್ಯಕ್ರಿಯೆ ಮಾಡಿಲ್ಲ. ಇಂಹತ ಮೃತದೇಹಗಳನ್ನು ವಿಲೇವಾರಿ ಮಾಡುವಂತೆ ಹಾಗೂ ಗಂಗೆಯ ತೀರದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ತಡೆಯುವಂತೆ ಕೋರಿ ಪ್ರಾಣೇಶ್ ಎಂಬುವರು ಪಿಐಎಲ್ ಸಲ್ಲಿಸಿದ್ದರು.
ಇದನ್ನೂ ಓದಿ: ಗಂಗೆಯಲ್ಲಿ ಹೆಚ್ಚಾದ ನೀರಿನ ಪ್ರಮಾಣ: ಮೃತದೇಹಗಳು ತೇಲಿ ಬರುವ ಸಾಧ್ಯತೆ
ಈ ಅರ್ಜಿಯ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜಯ್ ಯಾದವ್ ನೇತೃತ್ವದ ನ್ಯಾಯಪೀಠ, ಈ ಸಂಬಂಧ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೇ ಇಂತಹ ಶವಗಳ ವಿಲೇವಾರಿ ಅಥವಾ ಅಂತ್ಯಕ್ರಿಯೆಗೆ ವೈಯಕ್ತಿಕವಾಗಿ ನೀವೇನಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಅರ್ಜಿದಾರನನ್ನು ಪ್ರಶ್ನಿಸಿದ್ದು, ಇದು ಸಾರ್ವಜನಿಕ ಹಿತಾಸಕ್ತಿಗಿಂತ 'ಪ್ರಚಾರ ಹಿತಾಸಕ್ತಿ'ಯಂತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿದೆ.