ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುರಿದುಕೊಂಡು ಬಿದ್ದಿವೆ. ಸತತ ಎರಡು ವಾರಗಳಿಂದ ಸಂಸತ್ನ ಉಭಯ ಕಲಾಪಗಳು ಬರೀ ಗದ್ದಲ- ಗೊಂದಲದಲ್ಲೇ ಮುಂದುವರಿದಿದ್ದು, ಸತ್ವಯುತ ಚರ್ಚೆ ಎಂಬುದು ಮರೀಚಿಕೆ ಆಗಿದೆ.
ಈ ನಡುವೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ನಾಳೆ ಪ್ರತಿಪಕ್ಷಗಳ ನಾಯಕರ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಹಿತಿ ನೀಡಿದ್ದಾರೆ. ದೆಹಲಿಯ ಕಾನ್ಸಿಟಿಟ್ಯೂಟ್ ಕ್ಲಬ್ನಲ್ಲಿ ಈ ಸಭೆ ನಡೆಯಲಿದೆ.
ನಾಳಿನ ಸಭೆಗೆ ರಾಹುಲ್ ಗಾಂಧಿ ಎಲ್ಲ ಪ್ರತಿಪಕ್ಷಗಳ ನಾಯಕರು ಬಂದು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪೆಗಾಸಸ್ ಸ್ಪೈ ವೇರ್ ಬಳಕೆ ಹಾಗೂ ಕೇಂದ್ರ ಸರ್ಕಾರದ ಪಾತ್ರದ ವಿರುದ್ಧ ಉಗ್ರ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸಭೆಯಲ್ಲಿ ಎಲ್ಲ ನಾಯಕರು ಪಾಲ್ಗೊಳ್ಳಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಪ್ರತಿಪಕ್ಷದ ಎಲ್ಲ ಸಂಸದರು ಹಾಗೂ ಎರಡೂ ಸದನಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ. ಪ್ರತಿಪಕ್ಷಗಳು ಪೆಗಾಸಸ್ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ನಿಲುವಳಿ ಸೂಚನೆಯನ್ನು ಮಂಡಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಮಣಿದಿಲ್ಲ. ಪರಿಣಾಮ ಸದನವೂ ನಡೆಯುತ್ತಿಲ್ಲ.
ಈ ಸಂಬಂಧ ಪ್ರತಿಕ್ರಿಯೆ ನೀಡುತ್ತಿರುವ ಕೇಂದ್ರ ಸರ್ಕಾರ, ಈ ಸಂಬಂಧ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರು ಉತ್ತರ ನೀಡಿದ್ದಾರೆ ಎಂದು ಸಮಜಾಯಿಷಿ ನೀಡಿದೆ.