ನವದೆಹಲಿ: ದೇಶದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೋವಿಡ್, ಒಮಿಕ್ರಾನ್ ಸೋಂಕು ತಡೆಯಲು ಕೇಂದ್ರ ಸರ್ಕಾರ ಇಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ವಿದೇಶಗಳಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
2022ರ ಜವನರಿ 11 ರಿಂದ ಈ ನಿಯಮಗಳು ಅಂತಾರಾಷ್ಟ್ರೀಯ ಪ್ರಯಾಣಿಯಕರಿಗೆ ಅನ್ವಯವಾಗಲಿದೆ. ದೇಶಕ್ಕೆ ಆಗಮಿಸಿದ 8ನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯ ಫಲಿತಾಂಶವನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ ಅದನ್ನು ಆಯಾ ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡುತ್ತವೆ.
ಕೋವಿಡ್ ಪರೀಕ್ಷೆಯ ಫಲಿತಾಂಶಗಳು ನೆಗೆಟಿವ್ ಬಂದರೆ ಮುಂದಿನ 7 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಪಾಸಿಟಿವ್ ಬಂದರೆ ಅವರ ಮಾದರಿಗಳನ್ನು ಇಂಡಿಯನ್ ಸಾರ್ಸ್-ಕೋವಿ-2 ಜಿನೊಮಿಕ್ಸ್ ಕನ್ಸಾರಿಟಿಂ(INSACOG) ಪ್ರಯೋಗಾಲಯದ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ನಂತರ ನಿಗದಿತ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಎಲ್ಲಾ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಆನ್‌ಲೈನ್‌ನಲ್ಲಿ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂಘೋಷಣೆ ನಮೂನೆ ಮತ್ತು ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿರುವ ಆರೋಗ್ಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಾರೆ. ಸ್ಕ್ರೀನಿಂಗ್ ಸಮಯದಲ್ಲಿ ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುತ್ತದೆ. ಪಾಸಿಟಿವ್ ಬಂದರೆ ಅಂತಹವರ ಸಂಪರ್ಕಕ್ಕೆ ಬಂದಿದ್ದವರನ್ನು ಗುರುತಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು ಕೋವಿಡ್-19 ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕು. ಅವರು ಹೊರಡುವ ಅಥವಾ ವಿಮಾನ ಹತ್ತುವ ಮೊದಲು ವಿಮಾನ ನಿಲ್ದಾಣದಲ್ಲಿ ತಮ್ಮ ಕೋವಿಡ್ ಪರೀಕ್ಷಾ ಫಲಿತಾಂಶಗಳನ್ನು ಪಡೆದೇ ಭಾರತಕ್ಕೆ ಆಗಮಿಸಬೇಕಾಗಿದೆ.
ಇದನ್ನೂ ಓದಿ: ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಹೇಗಿರಲಿದೆ?