ಪಲಾಮು (ಜಾರ್ಖಂಡ್): ಜಾನುವಾರುಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಲಂಪಿ ವೈರಸ್‌ನ ಭೀತಿ ಇದೀಗ ಜಿಂಕೆಗಳಿಗೂ ಕಾಡುತ್ತಿದೆ. ರಾಜಸ್ಥಾನದಲ್ಲಿ ಜಿಂಕೆಗಳಲ್ಲಿ ಚರ್ಮ ಗಂಟು ರೋಗ ಹರಡಿರುವ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಜಾರ್ಖಂಡ್ನ ಪಲಾಮು ಹುಲಿ ಸಂರಕ್ಷಿತ ಪ್ರದೇಶದ ಜಿಂಕೆಗಳು ಕೂಡ ದೀರ್ಘಕಾಲದ ವೈರಸ್‌ನ ಅಪಾಯಕ್ಕೆ ಸಿಲುಕಿವೆ.
ಲಂಪಿ ವೈರಸ್‌ನ ಭೀತಿ ಹಿನ್ನೆಲೆಯಲ್ಲೇ ಪಲಾಮು ಟೈಗರ್ ರಿಸರ್ವ್ (ಪಿಟಿಆರ್) ಮ್ಯಾನೇಜ್‌ಮೆಂಟ್ ಅರಣ್ಯ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದೆ. ಜಿಂಕೆಗಳಲ್ಲಿ ಲಂಪಿ ವೈರಸ್ ಹರಡಿದ ಕಾರಣ ಸ್ಥಳೀಯ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಗಿದೆ. ಜಾನುವಾರುಗಳನ್ನು ಕಾಡಿಗೆ ಕೊಂಡೊಯ್ಯದಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ ಎಂದು ಪಲಾಮು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಕುಮಾರ್ ಅಶುತೋಷ್ ತಿಳಿಸಿದ್ದಾರೆ.
ಜೊತೆಗೆ ವಿವಿಧ ಪ್ರದೇಶಗಳಲ್ಲಿ ಗ್ರಾಮಸ್ಥರೊಂದಿಗೂ ಸಭೆ ನಡೆಸಲು ಸಹ ಯೋಜಿಸಲಾಗಿದೆ. ಜಿಂಕೆಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ. ವಿವಿಧ ಹಂತದ ಇಲಾಖೆಯ ಸಿಬ್ಬಂದಿಗೆ ವಿಸ್ತೃತವಾದ ಮಾದರಿ ಕಾರ್ಯವಿಧಾನ (ಎಸ್‌ಒಪಿ)ದ ಮಾಹಿತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಂಪಿ ವೈರಸ್ ಹಾವಳಿ: ಜಾನುವಾರು ಜಾತ್ರೆ ನಿರ್ಬಂಧಿಸಿದ ಸರ್ಕಾರ
ಪಿಟಿಆರ್ ಪಕ್ಕದ ಪ್ರದೇಶಗಳಲ್ಲಿ ಲಂಪಿ ವೈರಸ್ ಪತ್ತೆ: ಪಲಾಮು ಹುಲಿ ಸಂರಕ್ಷಿತ ಪ್ರದೇಶದಲ್ಲಿ 250ಕ್ಕೂ ಹೆಚ್ಚು ನೀರಿನ ಮೂಲಗಳಿವೆ. ಇದನ್ನು ಜಿಂಕೆ ಸೇರಿದಂತೆ ಇತರ ವನ್ಯಜೀವಿಗಳು ಬಳಸುತ್ತವೆ. ಐದು ಸಾವಿರಕ್ಕೂ ಹೆಚ್ಚು ಜಿಂಕೆಗಳಿವೆ. ಜಾನುವಾರುಗಳು ಸಹ ಈ ನೀರಿನ ಮೂಲವನ್ನು ಬಳಸುತ್ತಿದ್ದು, ಇದರಿಂದ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಅಶುತೋಷ್ ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪಿಟಿಆರ್ ಪಕ್ಕದ ಪ್ರದೇಶಗಳಲ್ಲಿ ಲಂಪಿ ವೈರಸ್ ಪತ್ತೆಯಾಗಿದೆ. ಜಾನುವಾರುಗಳಲ್ಲಿ ವೈರಸ್ ದೃಢಪಟ್ಟ ಪ್ರದೇಶವು ಪಲಾಮು ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಪಲಾಮು ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ 197 ಗ್ರಾಮಗಳಿದ್ದು, 1.67 ಲಕ್ಷ ಜಾನುವಾರುಗಳಿವೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ 15 ಜಿಂಕೆಗಳು ಸಾವು: ರಾಜಸ್ಥಾನದಲ್ಲಿ ಕಾಡು ಪ್ರಾಣಿಗಳಲ್ಲಿ, ವಿಶೇಷವಾಗಿ ಜಿಂಕೆಗಳಲ್ಲಿ ಲಂಪಿ ವೈರಸ್ ಆತಂಕ ಸೃಷ್ಟಿಸಿದೆ. ಬರ್ಮೆರ್ ಜಿಲ್ಲೆಯ ಜಿಲ್ಲೆಯ ಧೋರಿಮಣ್ಣಾ ವ್ಯಾಪ್ತಿಯ ಕಾತ್ರಾಳ ಗ್ರಾಮದಲ್ಲಿರುವ ಅಮೃತಾದೇವಿ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಲ್ಲಿ ಜಿಂಕೆಗಳಲ್ಲಿ ಚರ್ಮ ಗಂಟು ರೋಗ ಹರಡಿದೆ.
ಈಗಾಗಲೇ ಲಂಪಿ ಸ್ಕಿನ್ ಡಿಸೀಸ್‌ನಿಂದ ಒಟ್ಟು 15 ಜಿಂಕೆಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ. ಇನ್ನೂ 15 ಜಿಂಕೆಗಳು ಪ್ರಸ್ತುತ ಲಂಪಿ ರೋಗದಿಂದ ಬಳಲುತ್ತಿವೆ. ಕಾಲುಗಳು ಮತ್ತು ಕಣ್ಣುಗಳಲ್ಲಿ ಉರಿಯೂತ ಉಂಟಾದ ರೋಗಲಕ್ಷಣಗಳು ಕಂಡು ಬಂದಿವೆ. ಇನ್ನೊಂದು ಲಕ್ಷಣ ಎಂದರೆ ಎರಡು ಮೂರು ದಿನಗಳವರೆಗೆ ಉಸಿರಾಟದ ತೊಂದರೆ ಸಹ ಆಗುತ್ತದೆ ಎಂದು ಕೇಂದ್ರದ ಸಿಬ್ಬಂದಿ ಕಿಶೋರ್ ತಿಳಿಸಿದ್ದಾರೆ.
ಇನ್ನು, ರಾಜಸ್ಥಾನದಲ್ಲಿ ಒಟ್ಟು 1.10 ಲಕ್ಷ ಹಸುಗಳು ಈ ಚರ್ಮ ಗಂಟು ರೋಗದಿಂದ ಬಾಧಿತವಾಗಿವೆ. ಇದರಲ್ಲಿ ಇದುವರೆಗೆ 2,847 ಜಾನುವಾರುಗಳ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಲಂಪಿ ರೋಗದಿಂದ ಸಾವಿರಾರು ಜಾನುವಾರು ಸಾವು: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ